ಪುಟ:ನವೋದಯ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

437

ಬಾಳದೆ, ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸಲಾರೆವು. ಅದಕ್ಕೋಸ್ಕರ ಮೂಲ
ವೇತನ ಹೆಚ್ಚಾಗ್ಬೇಕೂಂತ ಕೇಳ್ತಿದ್ದೇವೆ...."
ಊರಿನ ಹೊರವಲಯದಲ್ಲಿ ತಳಿರುತೋರಣಗಳೇನೂ ಇರಲಿಲ್ಲ. ಒಳಗೆ
ಬೀದಿಯ ಗೋಡೆಗಳಲ್ಲಿ ಭಿತ್ತಿಪತ್ರಗಳೂ ಕಾಣಿಸಲಿಲ್ಲ. ಬಸ್ ನಿಲ್ದಾಣದಲ್ಲಿ ಮಾತ್ರ,
ಬಿಳಿಯ ಟೋಪಿ ಧರಿಸಿದ್ದ ಇಬ್ಬರು ಹುಡುಗರು, ಎದೆಗೆ ಬಣ್ಣದ ಕಾಗದದ ಚೂರು
ಗಳನ್ನು ಚುಚ್ಚಿಕೊಂಡು ನಿಂತಿದ್ದರು.
ಜಯದೇವ, ಅವರು ಸ್ವಯಂಸೇವಕರಿರಬಹುದೆಂದು ಊಹಿಸಿ, ಆವರ ಬಳಿ
ಸಾರಿದ.
"ಇಲ್ಲಿ ಉಪಾಧ್ಯಾಯರ ಸಮ್ಮೇಳನ ಎಲ್ಲಾಗುತ್ತೆ ಗೊತ್ತಾ?"
ಅವರಿಗೆ ಗೊತ್ತಿತ್ತು. ಇಬ್ಬರೂ ಒಟ್ಟಿಗೇ ಉತ್ತರವಿತ್ತರು:
"ಮಾಧ್ಯಮಿಕ ಶಾಲೇಲಿ."
"ಎಲ್ಲಿದೆ ಶಾಲೆ?"
ದೊಡ್ಡವನು ಚಿಕ್ಕವನಿಗೆ ಹೇಳಿದ:
"ತೋರಿಸ್ಬಿಟ್ಟು ಬಾರೋ."
ಆ ಹುಡುಗನೂ ಜಯದೇವನೂ ಹೊರಟಂತೆ ದೊಡ್ಡವನೆಂದ:
"ಬಿರ್ನೆ ಬಂದ್ಬಿಡು. ಅಲ್ಲೇ ನಿಂತ್ಬಿಟ್ಟೀಯ ಎಲ್ಲಾದರೂ."
ಶಾಲೆಯ ಮುಂದುಗಡೆ ಚಪ್ಪರ ಹಾಕಿ, ಚಾಪೆ ಹಾಸಿದ್ದರು. ಹತ್ತಾರು ಹುಡು
ಗರೂ ಕೆಲ ದೊಡ್ಡವರೂ ಅಲ್ಲಿ ಓಡಾಡುತ್ತಿದ್ದರು. ಶಾಲೆಯ ಜಗಲಿಯಲ್ಲಿ ಒಂದು
ಮೇಜಿನ ಬಳಿ, ಅದೇ ಪ್ರಾತಃಕಾಲ ನುಣ್ಣಗೆ ಕ್ಷೌರ ಮಾಡಿಸಿಕೊಂಡಿದ್ದ ಮಧ್ಯ ವಯಸ್ಕ
ರೊಬ್ಬರು ಕುಳಿತಿದ್ದರು. ಅವರೆದುರು ರಶೀತಿ ಪುಸ್ತಕವಿತ್ತು; ರಿಬ್ಬನುಗಳಿದ್ದುವು.
ಅದು ಸ್ವಾಗತ ಕಛೇರಿ ಇರಬಹುದೆಂದು ಲೆಕ್ಕ ಹಾಕಿ, ಜಯದೇವ ಅತ್ತ ನಡೆದ.
ಆತನ ಪ್ರಶ್ನೆಗೆ ಅವಕಾಶವನ್ನೇ ಕೊಡದಂತೆ, ಕುಳಿತಿದ್ದವರೆಂದರು:
"ಪ್ರತಿನಿಧಿ ಶುಲ್ಕ ಒಂದು ರೂಪಾಯಿ. ಮುಂಡೇದು ಇನ್ನೂ ಅರುವತ್ತು
ರೂಪಾಯಿ ಕರೆಕ್ಷನೂ ಆಗಿಲ್ವಲ್ಲಾ! ಬಂದದ್ದೇ ತಡ, ರಿಬ್ಬನು ಇಲ್ದೇನೆ ತಿಂಡಿಗೆ ಎದ್ಬಿ
ಟ್ರೂಂತ ಕಾಣುತ್ತೆ. ಏನ್ಹೇಳ್ಲಿ!"
ಜಯದೇವನಿಗೆ ನಗು ತಡೆಯಲಾಗಲಿಲ್ಲ. ರೂಪಾಯಿ ತೆತ್ತ. ಹೆಸರು ಹೇಳಿದ_
ತನ್ನದು, ಶಾಲೆಯದು, ಊರಿನದು.
[ಜಯದೇವ. ಯಾರಿಗೆ ಗೊತ್ತಿತ್ತು? ಎಲ್ಲರ ಹಾಗೆ ಅವನೂ ಒಬ್ಬ, ಅಷ್ಟೆ.]
ಆತ ಕೇಳಿದ:
"ವಿದ್ಯಾಸಚಿವರು ಬಂದಿದಾರೇನು?"
"ಸಚಿವರು! ಅವರು ಯಾಕ್ರಿ ಬರ್ತಾರೆ? ಟೆಲಿಗ್ರಾಂ ಬಂದಿದೆ. ಸಂದೇಹ ಕಳಿಸಿ
ದಾರೆ. ಆಗ್ಹೋಯ್ತು."