ಪುಟ:ನವೋದಯ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

438

ಸೇತುವೆ

“ಉದ್ಘಾಟನೆ ಯಾರು ಮಾಡ್ತಾರೆ ಹಾಗಾದರೆ?"
“ನಾವು ನೀವು ಮಾಡೋಕಾಗುತ್ಯೆ? ಪಾತಾಳಗರಡಿ ಹಾಕಿ ಇಲ್ಲೇ ಹುಡುಕ್ಬೇಕು
ಯಾರನ್ನಾದರೂ."
“ವಿದ್ಯಾಧಿಕಾರಿಗಳು?"
"ಮಧ್ಯಾಹ್ನದ ಊಟ ಮುಗಿಸ್ಕೊಂಡು ಟ್ಯಾಕ್ಸಿಮಾಡ್ಕೊಂಡು ಬಂದ್ಬಿಡ್ತಾರೆ.
ಬಿಲ್ಲು ನಾವು ಕೊಟ್ಟರಾಯ್ತು."
"ಹಾಗಾದರೆ ಹತ್ತು ಘಂಟೆಗೆ ಶುರುವಾಗೋದಿಲ್ಲ ಅನ್ನಿ."
"ಹತ್ತು ಘಂಟೆಗೆ? ರಾತ್ರೆ ಹತ್ತು ಘಂಟೆಗೆ ಶುರುವಾದ್ರೆ ನಿಮ್ಮ ಪುಣ್ಯ!"
ಜಯದೇವನ ಕೈಯಲ್ಲಿದ್ದ ಚೀಲವನ್ನು ನೋಡಿ ಅವರೆಂದರು:
"ಜಮಖಾನ ಕಂಬಳಿ ಎಲ್ಲ ಅದರಲ್ಲೇ ತುರುಕ್ಬಿಟ್ಟಿದೀರೊ? ಭೇಷ್. ಕೈಲೇ
ಹಿಡ್ಕೊಳ್ಳಿ. ಕಳೆದು ಹೋದ್ರೆ ಕಷ್ಟ."
ಸಮ್ಮೇಳನವನ್ನು ಕುರಿತಾದ ಆತನ ಕಲ್ಪನೆಯ ಚಿತ್ರಕ್ಕೂ ವಸ್ತುಸ್ಧಿತಿಗೂ
ಎಷ್ಟೊಂದು ಅಂತರವಿತ್ತು!
ಹಣ ಪಡೆದವರು ಹೇಳಿದರು:
"ಸುಮ್ನೆ ನಿಂತ್ಕೋಬೇಡಿ. ನೋಡಿ, ಅಲ್ಲಿ ಕಾಣಿಸುತ್ತಲ್ಲ ಹುಡುಗೀರ ಮಾಧ್ಯ
ಮಿಕ ಶಾಲೆ? ಆ ಜಾಗದಲ್ಲಿ ತಿಂಡಿ ಏರ್ಪಾಟು ಮಾಡಿದಾರೆ. ನೀವೂ ಹೋಗಿ. ಕುರಿ
ಹಿಂಡು ನುಗ್ಗಿದ ಹಾಗೆ ಡೆಲಿಕೇಟುಗಳು ನುಗ್ತಿರೋದು ಕಾಣಿಸೊಲ್ವೆ?"
ಈ ಒರಟು ಭಾಷೆ ಬೇಸರ ಬಂದು, ರೇಗಿ ಏನನ್ನಾದರೂ ಅಂದು ಬಿಡಬೇಕೆಂದು
ಜಯದೇವನಿಗೆ ತೋರಿತು, ಆದರೆ, ಸುಮ್ಮನೆ ಮನಸ್ಸಿನ ನೆಮ್ಮದಿ ಕಳೆದುಕೊಂದು
ಆಗುವ ಪ್ರಯೋಜನವಾದರೂ ಏನೆಂದು, ಆತ ಮಾತನಾಡಲಿಲ್ಲ. ಹುಡುಗಿಯರ
ಮಾಧ್ಯಮಿಕ ಶಾಲೆಗೆ ಹೋಗುವ ಬದಲು ಪೇಟೆ ಬೀದಿಗೆ ತಿರುಗಿದ. ಒಂದೂವರೆ ಆಣೆ
ಕೊಟ್ಟು ದಿನಪತ್ರಿಕೆ ಪಡೆದು, ಯಾವುದೋ ಹೋಟೆಲನ್ನು ಹೊಕ್ಕು ಕುಳಿತ. ಅಲ್ಲಿ
ಸ್ವಲ್ಪ ಹೊತ್ತಿದ್ದ ಬಳಿಕ, ಆ ಊರಿನ ಮುಖ್ಯ ರಸ್ತೆಗಳನ್ನು ಸುತ್ತಿದ. ಊಟದ
ಶಾಸ್ತ್ರವೂ ಮುಗಿದು ಹೋಗಲೆಂದು ಒಂದು ಹೋಟೆಲಿನಲ್ಲಿ ಎಂಟಾಣೆ ದಂಡ ತೆತ್ತ.
ಮರಳಿ ಬಂದ ಹೊತ್ತಿಗೆ, ಬೇರೆ ಬೇರೆ ಊರಿನ ಉಪಾಧ್ಯಾಯರು ಅಲ್ಲಿ ನೆರೆ
ದಿದ್ದರು. ಪೆಟ್ಟಿಗೆಯಲ್ಲಿದ್ದ ಧರ್ಮಾವರದ ಸೀರೆಗಳನ್ನು ಹೊರ ತೆಗೆದು ಉಟ್ಟು
ಶೋಭಿಸುತ್ತಿದ್ದ ಉಪಾಧ್ಯಾಯಿನಿಯರೂ ಕೆಲವರಿದ್ದರು. ಜಯದೇವನ ಸಮವಯಸ್ಕ
ರಾದ ಉಪಾಧ್ಯಾಯರೂ ಇಲ್ಲದಿರಲಿಲ್ಲ.
ವಿದ್ಯಾಧಿಕಾರಿ ಆಗಲೆ ಬಂದುಬಿಟ್ಟಿದ್ದರು.
["ಮಂತ್ರಿಗಳು ಬರೋದಿಲ್ಲಾಂತ ಗೊತ್ತಾದ್ಮೇಲೆ ಇವರೂ ತಡಮಾಡಿದ್ರು."]
ಅವರ ಒಪ್ಪಿಗೆ ಪಡೆದು, ಆ ಊರಿನ ಪುರ ಪ್ರೌಢಶಾಲೆಯ ನಿವೃತ್ತ ಮುಖ್ಯೋ
ಪಾಧ್ಯಾಯರನ್ನು ಉದ್ಘಾಟನೆಗೆ ಕರೆದರು.