ಪುಟ:ನವೋದಯ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

442

ಸೇತುವೆ

ಜಯದೇವ ಎದ್ದು, ನಿಧಾನವಾಗಿ ಹಾದಿ ಬಿಡಿಸಿಕೊಳ್ಳುತ್ತ , ಎಲ್ಲರ ದೃಷ್ಟಿಯ
ಕೇಂದ್ರವಾಗುತ್ತ, ವೇದಿಕೆಯ ಬಳಿಗೆ ನಡೆದ.
"ಇವನ ಗತಿಯಾಯ್ತಿನ್ನು," ಎಂದರು ಯಾರೋ.
"ಆ ಜುಬ್ಬ ಪಾಯಜಾಮ ನೋಡಿ. ತಾನೂ ಒಬ್ಬ ಪುಢಾರೀಂತ ತಿಳಕೊಂಡ್ಬಿಟ್ಟಿ
ದಾನೆ. ಶುದ್ಧ ಎಳೆ ನಿಂಬೇಕಾಯಿ," ಎಂದರು ಇನ್ನೊಬ್ಬರು.
ಜಯದೇವನಿಂದ ಪ್ರತಿನಿಧಿ ಶುಲ್ಕವನ್ನು ಪಡೆದಿದ್ದ ಉಪಾಧ್ಯಾಯರು-ದೂರ
ದಲ್ಲಿ ನಿಂತಿದ್ದವರು_ಮೂಗಿನ ಮೇಲೆ ಬೆರಳಿಟ್ಟು, "ಎಲ ಎಲಾ!" ಎಂದರು.
ವಿದ್ಯಾಧಿಕಾರಿ, ಪಕ್ಕಕ್ಕೆ ಬಂದು ನಿಂತ ಯುವಕನನ್ನು ಅಡಿಯಿಂದ ಮುಡಿಯ
ವರೆಗೂ ನೋಡಿ ಕೇಳಿದರು:
"ನೀವೇ ಏನು ಜಯದೇವ್?"
"ಹೌದು ಸಾರ್."
"ಯಾವ ಶಾಲೆ?"
ಹೆಸರು ಹೇಳಿದಾಗ, ಏನೋ ಜ್ಞಾಪಿಸಿಕೊಳ್ಳುವವರಂತೆ ಅವರ ಹಣೆನೆರಿಗೆ
ಕಟ್ಟಿತು.
"ನೀವು ಪದವೀಧರರೇನು?"
"ಹೌದು."
[ವಿದ್ಯಾಧಿಕಾರಿಯ ಪಾಲಿಗೆ ಈಗ ಅಪರಿಚಿತನಾಗಿರಲಿಲ್ಲ ಜಯದೇವ.]
ಅವರ ಮೈ, ಉದ್ಧಟ ಠೀವಿಯನ್ನು ಬಿಟ್ಟು ಸ್ವಲ್ಪ ಅತ್ತಿತ್ತ ಆಡಿತು. ಸ್ವರದ
ಕಠೋರತೆ ಕರಗಿತು. ಅವರೆಂದರು:
"ಇಂಥ ನಿರ್ಣಯ ಇಲ್ಲಿ ಮಂಜೂರು ಮಾಡೋದು ನನಗಿಷ್ಟವಿಲ್ಲ ಜಯದೇವ್.
ಅಶಿಸ್ತು ಅವಿಧೇಯತೆ ಬೆಳೆಯೋದಕ್ಕೆ ಇದು ಸಹಾಯಕವಾಗ್ತದೆ."
"ಅದರಲ್ಲಿ ಅಂಥಾದೇನೂ ಇಲ್ವಲ್ಲಾ ಸಾರ್. ಸರಕಾರಕ್ಕೆ ನಮ್ರವಾಗಿ ವಿನಂತಿ
ಮಾಡ್ಕೋತಿದೀವಿ, ಅಷ್ಟೆ."
"ನೀವು ನಿರ್ಣಯ ಮಾಡಿದ ತಕ್ಷಣ ಸರಕಾರ ಅಸ್ತು ಅನ್ನುತ್ತೇನು?"
"ಅನ್ನಲಾರದು. ಆದರೆ ನಮ್ಮ ಮನಸ್ನಲ್ಲಿ ಏನಿದೆ ಅನ್ನೋದು ಸರಕಾರಕ್ಕೆ
ಗೊತ್ತಾಗಲಿ."
ಜಯದೇವನ 'ಹಟಮಾರಿತನ' ಕಂಡು, ಅವರ ಸ್ವರ ಸ್ವಲ್ಪ ಕಠಿನವಾಯಿತು.
"ಇಲ್ಲ, ಈ ನಿರ್ಣಯಗಳಿಗೆ ನಾನು ಸಮ್ಮತಿ ಕೊಡೋದಿಲ್ಲ."
"ನಿಮ್ಮಿಷ್ಟ ಸಾರ್."
"ಹೋಗಿ ಕೂತ್ಕೊಳ್ಳಿ."
ಕಾಗದಕ್ಕಾಗಿ ಜಯದೇವ ಕೈನೀಡಿದ.
"ಅದಿಲ್ಲೇ ಇ‍‍ರ್ಲಿ. ನೀವು ಹೋಗಿ," ಎಂದರು ವಿದ್ಯಾಧಿಕಾರಿ.