ಪುಟ:ನವೋದಯ.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

445

ಜಯದೇವ್. ನಮಗೆ ಯಾವ ಭ್ರಮೇನೂ ಇರಬಾರ್‍ದು. ಆಗ ನಿರಾಶೆಯಾದರೆ
ಹೆಚ್ಚು ದುಃಖವಾಗೋದಿಲ್ಲ. ಸಂಕಟ ಸಹಿಸ್ಕೊಳ್ಳೋ ಸಾಮರ್ಥ್ಯವಿರುತ್ತೆ.'
ಸಮ್ಮೇಳನಕ್ಕೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡೇ ಬಂದಿದ್ದ ಆತ. ಭ್ರಮೆ
ನಿರಸನವಾಗಿತ್ತು. ಸಂಕಟವೂ ಆಗಿತ್ತು ಸ್ವಲ್ಪ. ಅಂದಿನ ಪಾಠದಿಂದ ಮುಂದೆ
ಸಹಾಯವಾಗುವುದು ಖಂಡಿತ. ವಸ್ತು ಸ್ಥಿತಿಯನ್ನು ಹೆಚ್ಚು ಹೆಚ್ಚು ಚೆನ್ನಾಗಿ ತಿಳಿಯು
ವುದರಿಂದಲೇ, ಒಬ್ಬ ಮನುಷ್ಯನಿಂದ ಒಳ್ಳೆಯ ಕೆಲಸ ಸಾಧ್ಯ.
ಜಯದೇವ ಯೋಚಿಸಿದ:
ವಿದ್ಯೆಯ ಕ್ಷೇತ್ರದಲ್ಲಿ ತಾನು ಮಾಡಬೇಕಾದ ಒಳ್ಳೆಯ ಕೆಲಸ ಯಾವುದು?
ಯಾವುದು?
ಆ ಕತ್ತಲೆಯಂತೆಯೇ ಅಸ್ಪಷ್ಟವಾಗಿತ್ತು ಪ್ರತಿಯೊಂದೂ.
ಒಟ್ಟಿನಲ್ಲಿ ಆತ್ಮವಿಶ್ವಾಸ ಉಳಿಸಿಕೊಳ್ಳಬೇಕಾದುದು ಮುಖ್ಯ-ಎಂದು ತನ್ನಷ್ಟಕ್ಕೆ
ಜಯದೇವ ಅಂದುಕೊಂಡ.
ಆತನ ಕೈಬೆರಳುಗಳು, ಪ್ರತಿನಿಧಿ ಎಂಬ ಸಂಕೇತವಾಗಿ ಎದೆಗೆ ಚುಚ್ಚಿದ್ದ ರಿಬ್ಬನಿ
ನೊಡನೆ ಆಟವಾಡಿದುವು.



೧೩

ಸಮ್ಮೇಳನದಿಂದ ಹಿಂತಿರುಗಿದ ಜಯದೇವ ಸುನಂದೆಗೊಮ್ಮೆ ಮುಖ ತೋರಿಸಿ,
ಹಾಜರಿ ಹೇಳಿ, ತಡವಾಯಿತೆಂದು ಶಾಲೆಗೆ ಓಡಿದ.
ನಂಜುಂಡಯ್ಯ ಕೇಳಿದರು:
"ಹ್ಯಾಗಿತ್ತು ಸಮ್ಮೇಳನ?"
ಜಯದೇವನ ವರದಿ ಟೀಕೆಗಳನ್ನು ಕೇಳಿದಾಗ ಅವರೆಂದರು:
"ಅಲ್ಲಿ ಆಗೋದು ಅಷ್ಟೇ ಅಂತ ನನಗೆ ಗೊತ್ತಿತ್ತು."
ಲಕ್ಕಪ್ಪಗೌಡರು ಜಯದೇವನನ್ನು ಕಂಡಾಗ ಕೇಳಿದ ರೀತಿಯೇ ಬೇರೆ:
"ಎಲ್ಲಾ ಸಾಂಗವಾಗಿ ನಡೀತು ತಾನೆ?"
ಅದು ಪರಿಹಾಸ್ಯದ ಧ್ವನಿಯಿಂದ ಕೂಡಿದ್ದ ಪ್ರಶ್ನೆ.
“ಓಹೋ!" ಎಂದು ಜಯದೇವ ಸುಮ್ಮನಾದ.
ಆತ ಸಮ್ಮೇಳನದ ವಿಷಯ ವಿವರವಾಗಿ ಮಾತನಾಡಿದುದು ತಿಮ್ಮಯ್ಯನವ
ರೊಡನೆ, ಆ ಸಂಜೆ ಅವರು ಭೇಟಿಯಾದಾಗ.
ಅವರೆಂದರು: