ಪುಟ:ನವೋದಯ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

446

ಸೇತುವೆ

“ಪ್ರಾಥಮಿಕ ಶಾಲಾ ಉಪಾಧ್ಯಾಯರದೂ ಇಷ್ಟೆ. ಮಾಧ್ಯಮಿಕದವರದೂ
ಇಷ್ಟೆ. ಇನ್ನು ಪ್ರೌಢದವರದು ಇದಕ್ಕಿಂತ ಬೇರೆಯಾಗಿರುತ್ತೇಂತ ನಾನು
ನಂಬೋದಿಲ್ಲ."
"ಆ ನಂಬಿಕೆ ನನಗೂ ಇಲ್ಲ," ಎಂದ ಜಯದೇವ.
ಆತನ ಧ್ವನಿಯಲ್ಲಿದ್ದ ವ್ಯಥೆಯನ್ನು ಗಮನಿಸಿ ತಿಮ್ಮಯ್ಯ ಅಂದರು:
“ನೀವ್ಯಾತಕ್ಕೆ ಸಂಕಟಪಟ್ಕೋತೀರಿ ಅಂತ? ಇದನ್ನು ಸರಿಪಡಿಸೋದು ಬ್ರಹ್ಮ
ನಿಂದಲೂ ಸಾದ್ಯವಿಲ್ಲ."
"ಅದು ನಿರಾಶೆಯ ತತ್ತ್ವಜ್ಞಾನ ತಿಮ್ಮಯ್ಯನವರೇ."
"ಹಾಗಾದರೆ ಆಶೆಯ ತತ್ವಜ್ನಾನ ಯಾವುದು? ಸ್ವಲ್ಪ ಹೇಳಿ."
"ಉಪಾಧ್ಯಾಯರಲ್ಲಿ ಜಾಗೃತಿ ಉಂಟುಮಾಡ್ಬೇಕು."
"ಸತ್ತುಹೋಗಿರೋ ಮರಕ್ಕೆ ನೀರೆರೀಬೇಕೂಂತ ಹೇಳ್ತಾ ಇದೀರಿ ನೀವು."
"ಮರ ಸತ್ತಿಲ್ಲ. ನಾವು ನೀವು ಬದುಕಿಲ್ವೇನು?"
"ಆಗಲಪ್ಪಾ. ಈ ನೀರೆರಿಯೋ ಕೆಲಸ ಮಾಡೋರು ಯಾರು?"
“ನೀವು ನಾವೇ. ಇನ್ಯಾರು?"
"ಸರಿಹೋಯ್ತು! ಈ ವಾದಕ್ಕೆ ತುದಿಯೂ ಇಲ್ಲ, ಬುಡವೂ ಇಲ್ಲ."
ತಿಮ್ಮಯ್ಯ ನಶ್ಯದ ಡಬ್ಬ ಎತ್ತಿಕೊಂಡರು. ಅವರು ಯೋಚಿಸತೊಡಗಿದ
ರೆಂಬುದಕ್ಕೆ ಸೂಚನೆ ಅದು. ನಶ್ಯದ ಬಣ್ಣಕ್ಕೆ ತಿರುಗಿದ್ದ ಕರವಸ್ತ್ರದಿಂದ ಮೂಗು
ಒರೆಸಿ ಅವರೆಂದರು:
"ಸಮ್ಮೇಳನ ಯಶಸ್ವಿಯಾಗಿ ನಡೀತೂಂತ ಪತ್ರಿಕೇಲಿ ನಾಳೆ ವರದಿ ಬರುತ್ತೆ."
"ಹೌದು."
"ನಿಮ್ಮ ನಿರ್ಣಯಗಳ ವಿಷಯ ಅದರಲ್ಲಿ ಒಂದು ಸಾಲೂ ಇರೋದಿಲ್ಲ."
"ಯಾಕಿರುತ್ತೆ?"
"ಅದು ಸರಿಯಲ್ಲ, ಅಲ್ಲಿ ನಡೆದದ್ದೆಲ್ಲಾ ದಾಖಲೆಯಾಗ್ಲೇಬೇಕು."
"ಹ್ಯಾಗೆ?"
"ಆ ಕೆಲಸ ನಾನು ಮಾಡ್ತೀನಿ. 'ಯಶಸ್ವೀ ಸಮ್ಮೇಳನ' ಅಂತ ಒಂದು ನಾಟಕ
ಬರೀತೀನಿ."
ಜಯದೇವನಿಗೆ ಆ ಸೂಚನೆ ಇಷ್ಟವಾಯಿತು. ಆತನೆಂದ:
"ನೋಡಿ. ಹತ್ತಿಪ್ಪತ್ತು ಕಡೆ ಆ ನಾಟಕ ಆಡಿದರೆ ಉಪಾಧ್ಯಾಯರಲ್ಲಿ ಜಾಗೃತಿ
ತನ್ನಷ್ಟಕ್ಕೆ ಆಗುತ್ತೆ."
"ಸರಿ, ಕಸದಲ್ಲೂ ರಸ ಕಾಣೋ ನಿಮ್ಮ ಪ್ರವೃತ್ತಿ ಇದ್ದೇ ಇದೆಯಲ್ಲ," ಎಂದು
ಹೇಳಿ ತಿಮ್ಮಯ್ಯ ನಕ್ಕರು.
ಮನೆಯಲ್ಲಿ ಸುನಂದೆಯೂ ವಿವರ ಕೇಳಿದಳು.