ಪುಟ:ನವೋದಯ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

448

ಸೇತುವೆ

"ಬಸ್‍ಸ್ಟ್ಯಾಂಡಿಲ್ವೆ? ಅದರ ಉತ್ತರಕ್ಕೆ."
"ನೋಡಿದೀನಿ. ಎತ್ತರದಲ್ಲಿದೆ. ಗಾಳಿ ಚೆನ್ನಾಗಿ ಓಡಾಡುತ್ತೆ."
"ಕಟ್ಟಡದ ಖರ್ಚಿಗೇಂತಲೂ ಸಾವಿರ ರೂಪಾಯಿ ವಾಗ್ದಾನ ಮಾಡಿದಾರೆ.
ಇನ್ನೊಂದು ಸಾವಿರ ಕಿತ್ಕೋಬಹುದು. ಹೈಸ್ಕೂಲಿಗೆ ಅವರ ಹೆಸರೇ ಇಟ್ಟರಾಯ್ತು."
ವಿದ್ಯಾಮಂದಿರಕ್ಕೆ ಯಾವನೇ ಒಬ್ಬ ವ್ಯಕ್ತಿಯ ಹೆಸರಿಡುವುದನ್ನು ಜಯದೇವ
ಎಂದೂ ಇಷ್ಟಪಟ್ಟವನಲ್ಲ. ಅಂತಹ ಹೆಸರುಗಳೆಲ್ಲ ಆತನಿಗೆ ಅಸಹ್ಯವಾಗಿ ತೋರುತ್ತಿ
ದ್ದುವು. ಇಲ್ಲಿ ಈ ಊರಿನ ಹೈಸ್ಕೂಲು ಕಟ್ಟಡಕ್ಕೂ ಅಂತಹದೊಂದು ಹೆಸರು...
ಜಯದೇವ ಮೌನವಾಗಿದ್ದುದನ್ನು ಕಂಡು ನಂಜುಂಡಯ್ಯನೇ ಮುಂದು
ವರಿಸಿದರು:
"ಇಷ್ಟು ಆಗಿರೋದು ಶಂಕರಪ್ಪನವರ ಪ್ರಯತ್ನದಿಂದ. ತಮ್ಮಲ್ಲೇ ಇದ್ದಿದ್ರೆ
ಕಟ್ಟಡಕ್ಕೆ ಬೇಕಾಗೋ ಹಣವನ್ನೆಲ್ಲ ತಾವೊಬ್ರೇ ಕೊಡ್ತಾ ಇದ್ರು ."
"ಶಂಕರಪ್ಪನವರು ದೊಡ್ಡ ಶ್ರೀಮಂತರಲ್ವೆ ಸಾರ್?"
"ಶ್ರೀಮಂತರೇನೋ ನಿಜ. ಆದರೆ ಕಟ್ಟಡದ ಪ್ರಶ್ನೆ ಹಲವಾರು ಸಾವಿರದ್ದು.
ಸಾಲದ್ದಕ್ಕೆ ಸಾರ್ವಜನಿಕ ಕೆಲಸ. ಹತ್ತಾರು ಜನ ಸೇರಿದರೆ ಸುಲಭವಾಗಿ ಆಗುತ್ತೆ.
ಅಲ್ವೆ?"
"ಅದು ನಿಜ."
"ಕಟ್ಟಡಕ್ಕೆ ಚೆನ್ನಣ್ಣನವರ ಹೆಸರೇ ಇರಲೀಂತ ಸಲಹೆ ಮಾಡ್ದೋರೂ ಅವರೇ.
ಅದೀಗ ನಿಜವಾದ ತ್ಯಾಗ!"
ಎಂತಹ ದುರವಸ್ಥೆ ಒದಗಿತ್ತು, 'ತ್ಯಾಗ' ಪದಕ್ಕೆ!
ಜಯದೇವ ಉಗುಳು ನುಂಗಿದ.
ನಂಜುಂಡಯ್ಯನೆಂದರು:
"ಎರಡನೆ ಕರಪತ್ರ ಹೊರಡಿಸ್ಬೇಕು ಜಯದೇವ್. ಅದರಲ್ಲಿ ಈ ಕೊಡುಗೆ
ವಿಷಯ ಜಾಹೀರುಮಾಡ್ಬೇಕು. ಆಗದೆ?"
"ಸರಿ ಸಾರ್."
"ನಿನ್ನೆ ರಾತ್ರೆ ಶಂಕರಪ್ಪನೋರು ಶುಭವಾರ್ತೆ ತಂದಾಗಿನಿಂದ, ನಿಮಗೆ
ಯಾವತ್ತು ತಿಳಿಸೇನು ಅಂತ ತವಕ ಪಡ್ತಾ ಇದ್ದೆ. ನಿಜವಾಗಿಯೂ ನನಗೆ ತುಂಬಾ
ಸಂತೋಷವಾಗಿದೆ. ಎಷ್ಟೋ ಕಾಲದಿಂದ ಕಾಣ್ತಿದ್ದ ಕನಸು ಕೈಗೂಡೋ ಸಂದರ್ಭ
ಒದಗ್ತಿದೆ ಅನ್ನೋದು ಸಾಮಾನ್ಯ ವಿಷಯವೆ?"
ರಂಗರಾಯರೂ ಹಿಂದೆ ಹೇಳಿದ್ದರು_ಕನಸು ಕಾಣುವುದು ಒಳ್ಳೆಯದೆಂದು.
ಕನಸು ಕಾಣದ ಮನುಷ್ಯ ಏನನ್ನೂ ಸಾಧಿಸಲಾರ.
ಜಯದೇವನ ಮೌನ ಅರ್ಥವಾಗದೆ ನಂಜುಂಡಯ್ಯನೆಂದರು:
“ಯಾಕೆ ಸುಮ್ಮನಿದೀರಾ?"