ಪುಟ:ನವೋದಯ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

451

ಎಂದು.
ದಿನ ತಿಳಿದಾಗ ಅವರೆಂದರು:
"ಒಂದು ವಾರ ಅಲ್ಲಿರ್ತೀರೇನು?"
"ಇಲ್ಲವಪ್ಪ. ಹಬ್ಬ ಮುಗಿದ ತಕ್ಷಣ ಬಂದ್ಬಿಡ್ತೀನಿ."
"ನಿಮ್ಮ ಹೆಸರಿಗೆ ರಜಾ ಇನ್ನೂ ಬೇಕಾದಷ್ಟಿದೆಯಲ್ಲ."
"ಶಾಲೆ ನಡೀತಿರುವಾಗ ಬರದೇ ಇರೋಕೆ ಬೇಜಾರು."
"ಮದುವೆ ಆದ್ಮೇಲೂ ಈ ಮಾತು ಹೇಳ್ತಿದೀರಲ್ಲ. ಆಶ್ಚರ್ಯ!"
ಜಯದೇವ ನಕ್ಕು ಹೇಳಿದ:
“ಹೋಗಲಿ ಸಾರ್. ನೀವು ಅಷ್ಟು ಒತ್ತಾಯಿಸ್ತೀರಿ ಅಂದ್ಮೇಲೆ ಒಂದೆರಡು
ದಿವಸ ಹೆಚ್ಚಾಗೇ ಅಲ್ಲಿದ್ದು ಬರ್ತೀನಿ."
"ಭೇಷ್! ಬೆಂಗಳೂರಲ್ಲಿ ನಿಮ್ಮಿಂದ ನನಗೆ ಎರಡು ಕೆಲಸವಾಗ್ಬೇಕು."
"ಧಾರಾಳವಾಗಿ ಮಾಡ್ಕೊಂಡು ಬರ್ತೀನಿ."
"ಒಂದು ಸ್ವಾರ್ಥದ್ದು, ಇನ್ನೊಂದು ಪರಾರ್ಥದ್ದು."
"ಹೇಳಿ ಸಾರ್."
"ಆಕಾಶವಾಣಿ ಬೆಂಗಳೂರಿಗೆ ಹೋದ ಈ ಒಂದು ವಾರದಿಂದ ರೇಡಿಯೋ
ಕೊಂಡುಬಿಡಬೇಕೂಂತ ಮನಸಾಗಿದೆ. ಇಷ್ಟು ವರ್ಷ ಅದರ ಯೋಚನೆಮಾಡಿರಲಿಲ್ಲ.
ಆದರೆ ಈ ಹೊಸ ಸನ್ನಿವೇಶದಲ್ಲಿ_"
"ನಿಮ್ಮನೇಲಿ ರೇಡಿಯೋ ಇದ್ದರೆ ನನಗೂ ಅನುಕೂಲ. ಯಾವತ್ತಾದರೂ
ಯಾವುದಾದರೂ ಕಾರ್ಯಕ್ರಮ ಕೇಳ್ಬಹುದು. ಹೇಳಿ, ಯಾವುದು ಬೇಕು?"
"ಆಯ್ಕೆಯ ಜವಾಬ್ದಾರೀನ ನಿಮಗೇ ಬಿಟ್ಟೀದೀನಿ. ಮುನ್ನೂರು ರೂಪಾಯಿ
ಒಳಗಿಂದು."
"ಫಿಲಿಪ್ಸಾಗಲೀ, ಬುಶ್ ಆಗಲೀ ತರ್ತೀನಿ. ನನ್ನ ಭಾವನಿಗೆ ಇದರ ಮಾಹಿತಿ
ಜಾಸ್ತಿ. ಅಷ್ಟು ರೂಪಾಯಿ ಒಳಗೆ, ಚೆನ್ನಾಗಿರೋದೇ ಸಿಗುತ್ತೆ."
"ಇನ್ನೊಂದು, ಹೈಸ್ಕೂಲಿಗೆ ಸಂಬಂಧಪಟ್ಟದ್ದು. ಮುಖ್ಯವಾಗಿರೋ ಎಲ್ಲಾ
ದಿನಪತ್ರಿಕೆಗಳ ಸಂಪಾದಕರನ್ನ ನೀವು ಕಂಡು ಬರಬೇಕು."
ಪತ್ರಿಕಾ ಸಂಪಾದಕರನ್ನು ಕಾಣುವ ಕೆಲಸ ಅಪ್ರಿಯವೇನೂ ಆಗಿರಲಿಲ್ಲ. ಆದರೆ
ಆ ಭೇಟಿಯಿಂದ ಹೆಚ್ಚಿನ ಪ್ರಯೋಜನವಾದೀತೆಂಬ ನಂಬಿಕೆ ಜಯದೇವನಿಗಿರಲಿಲ್ಲ.
"ಅದು ಬಹಳ ಅಗತ್ಯ ಎಂದಾದರೆ, ಕಂಡು ಬರ್ತೀನಿ."
"ಹೌದು, ಅಗತ್ಯ. ವೈಯಕ್ತಿಕವಾಗಿ ಹೋಗಿ ನೋಡೋದು ಯಾವಾಗಲೂ
ಮೇಲು. ಹೈಸ್ಕೂಲು ಸ್ಥಾಪನೆಗೆ ನಾವು ಮಾಡ್ತಿರೋ ಪ್ರಯತ್ನಗಳನ್ನೆಲ್ಲ ವಿವರಿಸಿ
ಹೇಳಿ. ಅವರು ನಾವು ಕಳಿಸೋ ವಾರ್ತೆಗಳನ್ನೆಲ್ಲ ಪೂರ್ತಿಯಾಗಿ ಪ್ರಕಟಿಸಿದರೆ ನಮಗೆ
ತುಂಬಾ ಸಹಾಯವಾಗುತ್ತೆ."