ಪುಟ:ನವೋದಯ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

457

ಆದರೆ ಒಳಗಿಂದೊಳಗೆ ಸುನಂದೆ ಜಯದೇವರಿಬ್ಬರಿಗೂ, ಪ್ರತ್ಯೇಕವಾದ ಕೊಠ
ಡಿಯೆ ತಮಗೆ ದೊರೆಯಿತೆಂದು ಸಂತೋಷವಾಯಿತು.
...ಜಯದೇವ ಸುನಂದೆಯರ ಜತೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದುದು,
ತಿಮ್ಮಯ್ಯ ಮೇಸ್ಟ್ರ ಚಿಗುರೆಲೆ_ದುಂಡು ಮಲ್ಲಿಗೆ_ಬದನೆಕಾಯಿಗಳು ಮಾತ್ರ. ಆದರೆ
ದಂಪತಿ ನೀಡಿದ್ದ ವಿಪುಲವಾದ ವಿವರದ ಫಲವಾಗಿ, ತಿಮ್ಮಯ್ಯನವರೂ ಆ ಬಳಗದ
ಒಬ್ಬ ಅಗೋಚರ ಸದಸ್ಯರಾದರು. ಅವರ ಮಾತುಗಳನ್ನು ಕೇಳಿದವರಿಗೆಲ್ಲ, ತಿಮ್ಮಯ್ಯ
ನವರಿಲ್ಲದ ಊರು ಬಲು ಸಪ್ಪೆ ಎನಿಸುತ್ತಿತ್ತು.
ಶ್ರೀಪತಿರಾಯರು ತಿಳಿಯ ಬಯಸಿದ ಬೇರೆ ಒಂದೆರಡು ವಿಷಯಗಳಿದ್ದುವು.
ಆದರೆ ನೇರವಾಗಿ ಜಯದೇವನೊಡನೆಯೆ ಆ ಪ್ರಸ್ತಾಪ ಮಾಡುವುದು ಅವರಿಗೆ ಸರಿ
ತೋರಲಿಲ್ಲ.
ತಂದೆ ಮಗಳನ್ನು ಕೇಳಿದರು:
"ಮನೆ ದೊಡ್ಡದಾಗಿದೆಯೇನೆ?"
"ಹೂಂ. ಅನುಕೂಲವಾಗಿದೆ."
"ಮನೇಲೆ ಟ್ಯೂಶನ್ ಇಟ್ಕೊಂಡಿದೆಯಾ?"
"ಇಲ್ಲ. ಎಷ್ಟೋ ಹುಡುಗರು ಬಂದು ಕೇಳಿದ್ರೂ ಮನೇಲಿ ಪಾಠ ಹೇಳ್ಕೊ
ಡೋದಿಲ್ಲ ಅಂದ್ಬಿಟ್ರು."
ಅಳಿಯನನ್ನು ಟೀಕಿಸಬೇಕೆನಿಸಿತು ಶ್ರೀಪತಿರಾಯರಿಗೆ. ಅದರೆ ಮಗಳೆದುರು ಆ
ಕೆಲಸಮಾಡಲಿಲ್ಲ.
ಬೇರೊಂದು ಬಳಸು ಪ್ರಶ್ನೆ ಅವರು ಕೇಳಿದರು:
"ಬೆಂಗಳೂರಿಗಿಂತ ಖರ್ಚು ಜಾಸ್ತೀನೇನೆ ಅಲ್ಲಿ?"
"ಇಲ್ಲವಪ್ಪ. ಅಲ್ಲಿ ಎಂಥಾ ಖರ್ಚು?"
ಮುಂದಿನ ಹೆಜ್ಜೆ ಸುಲಭವಾಯಿತೆಂದು ಶ್ರೀಪತಿರಾಯರೆಂದರು:
"ದುಡ್ಡು ಮಿಗಿಸಿದೀರಿ ಅನ್ನು."
"ಮಿಗುವಷ್ಟು ಎಲ್ಲಿರುತ್ತೆ? ಸಂಬಳವೆಲ್ಲ ವೆಚ್ಚಕ್ಕೇ ಸರಿ."
ಶ್ರೀಪತಿರಾಯರ ಮುಖ ಗಂಭೀರವಾಯಿತು. ಹೇಳಬೇಕಾಗಿದ್ದುದು ಮರೆತು
ಹೋಯಿತೆಂಬಂತೆ ಸುನಂದೆಯೇ ಅಂದಳು:
"ಸಾಲ ಮಾತ್ರ ಈವರೆಗೂ ನಾವು ಮಾಡಿಲ್ಲ."
ಗೃಹಿಣಿ ಅಭಿಮಾನದಿಂದ ಹೇಳಿದ ಮಾತು.
ತಂದೆ ಅಷ್ಟರಿಂದಲೆ ತೃಪ್ತರಾಗಬೇಕಾಯಿತು.
ಮನೆಯಲ್ಲಿ, ಜಯದೇವ ತಂದಿದ್ದ ಕರಪತ್ರಗಳು ಅವರ ಕಣ್ಣಿಗೆ ಬಿದ್ದುವು.
ಮೂಗಿಗೆ ಕನ್ನಡಕವೇರಿಸಿ ಕುತೂಹಲದಿಂದ ಅವರು, ಅವುಗಳನ್ನೋದಿದರು.

58