ಪುಟ:ನವೋದಯ.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

458

ಸೇತುವೆ

ಕನ್ನಡಕ ಕೆಳಗಿಳಿಸಿ, ಅವರು ಅಳಿಯನತ್ತ ತಿರುಗಿದರು.
"ಜನರೆಲ್ಲ ಹ್ಯಾಗಿದಾರೆ ಜಯಣ್ಣ? ನಂಬಿಗಸ್ಥರೋ? ಅಲ್ಲ, ನಂಬಿಸಿ ಕತ್ತು
ಕುಯ್ಯೋ ಆಸಾಮಿಗಳೋ?"
"ಅವರಲ್ಲಿ ಒಬ್ಬಿಬ್ಬರು ಚೆನ್ನಾಗಿ ಗೊತ್ತು. ನಾನಂತೂ ಸ್ಟಾಫಿಗೆ ಸೇರ್ಲೇಬೇಕೂಂತ
ಒತ್ತಾಯಿಸ್ತಿದಾರೆ."
"ಈ ಖಾಸಗೀ ಶಾಲೆಗಳದ್ದೆಲ್ಲ ಸ್ವಲ್ಪ ಕಷ್ಟವೇ ಯಾವಾಗಲೂ. ಮಕ್ಕಳು
ಸಂಬಳ ಸರಿಯಾಗಿ ಕೊಡೋದಿಲ್ಲ."
ಅವರು 'ಮಕ್ಕಳು' ಎ೦ದುದು, ಖಾಸಗಿ ಶಾಲೆಗಳನ್ನು ನಡೆಸುವ ಪ್ರಮುಖ
ರನ್ನು ಉದ್ದೇಶಿಸಿ.
"ಅದೇನೋ ನಿಜ," ಎಂದ ಜಯದೇವ.
ಸ್ವಾನುಭವ ಇರದೇ ಇದ್ದರೂ ಖಾಸಗಿ ಶಾಲೆಗಳ ವಿಷಯ ಆತ ಸಾಕಷ್ಟು ಕೇಳಿ
ತಿಳಿದಿದ್ದ. ಆದರೂ ಆ ಹೈಸ್ಕೂಲು ಯಶಸ್ವಿಯಾಗುವ ವಿಷಯದಲ್ಲಿ ಮಾವನಿಗೆ
ಅಪನಂಬಿಕೆ ಹುಟ್ಟಬಾರದೆಂದು ಆತನೆಂದ:
"ಹೈಸ್ಕೂಲು ಸ್ಥಾಪನೆಗೆ ಊರಿನವರ ಬೆಂಬಲ ಬೇಕಾದಷ್ಟಿದೆ. ಹುಡುಗರಿಗೂ
ಕೊರತೆ ಇಲ್ಲ. ಸುತ್ತುಮುತ್ತಲಿನ ಎಷ್ಟೋ ಹಳ್ಳಿಗಳಿಗೆ ಅದೇ ಕೇಂದ್ರ."
ಅಂತೂ ಹೈಸ್ಕೂಲಿನಲ್ಲಿ ಅಧ್ಯಾಪಕವೃತ್ತಿ, ಈಗಿರುವುದಕ್ಕಿಂತ ಹೆಚ್ಚು ಸಂಪಾದನೆ
ಯಾಗುವ ಉದ್ಯೋಗ_ಎಂಬುದು ಸ್ಪಷ್ಟವಾಗಿತ್ತು.
ಬೆಂಗಳೂರಿನಲ್ಲಿ ಜಯದೇವ ಮಾಡಬೇಕಾದ 'ಹೈಸ್ಕೂಲಿನ ಕೆಲಸ' ಒಂದಿತ್ತು.
ಆ ನಿಮಿತ್ತದಿಂದ ಆ ದಿನವೆಲ್ಲ ವೇಣು ಮತ್ತು ಆತ ಬೆಂಗಳೂರು ಸುತ್ತಿದರು. ಪತ್ರಿಕಾ
ಕಛೇರಿಗಳನ್ನು ಹೊಕ್ಕು ಹೊರ ಬಂದರು. ಸುದ್ದಿಯ ಕಚ್ಚಾ ಮಾಲು, ಬಳಕೆಯ
ಸಾಮಗ್ರಿಯಾಗಿ ಮಾರ್ಪಡುವ ಕಾರಖಾನೆಗಳನ್ನು, ಅವರು ಕಂಡರು.
ಏನೋ ಮಹಾ ಕೆಲಸ ಮಾಡಿದವರಂತೆ ತೃಪ್ತರಾಗಿ, ಕೊನೆಯಲ್ಲಿ, ಪರೇಡ್
ರಸ್ತೆಯಲ್ಲಿದ್ದ ಇಂಡಿಯಾ ಕಾಫಿ ಬಾರನ್ನು ಹೊಕ್ಕು ಕಾಫಿ ಕುಡಿದರು.
ಜಯದೇವನ ಪಾಲಿಗೆ ಅದಕ್ಕಿಂತಲೂ ಹೆಚ್ಚು ಜವಾಬ್ದಾರಿಯದಾಗಿದ್ದ ಕೆಲಸ,
ರೇಡಿಯೋ ಕೊಳ್ಳುವುದು. ಇನ್ನೊಬ್ಬರ ಹಣ. ಎಚ್ಚರಿಕೆಯಿಂದಲೆ ಖರ್ಚು ಮಾಡ
ಬೇಕಾದ ಅಗತ್ಯವಿತ್ತು.
ಆದರೆ ವೇಣು, ಆ ಕೆಲಸವನ್ನು ಸುಲಭಗೊಳಿಸಿದ. ಫಿಲಿಪ್ಸ್ ರೇಡಿಯೋ,
ಹೊದಿಕೆಯ ಪೆಟ್ಟಿಗೆಯೊಳಗೆ ಕುಳಿತು ಅವರ ಮನೆಗೆ ಬಂತು. ಚಿಲ್ಲರೆ ರೂಪಾಯಿಗಳೂ
ಉಳಿದುವು.
"ನಿಮ್ಮ ಮನೆಗೂ ಒಂದು ಬೇಡವೆ?" ಎಂದು ಶ್ರೀಪತಿರಾಯರು ಕೇಳಿದರು,
ಮೊದಲು ಅಳಿಯನನ್ನೂ ಬಳಿಕ ಮಗಳನ್ನೂ ನೋಡುತ್ತ.
ಸುನಂದಾ ಗಂಡನ ಮುಖ ನೋಡಿದಳು. ಆ ತುಟಿಗಳು ಬಿಗಿದು ಕುಳಿತಿದ್ದ