ಪುಟ:ನವೋದಯ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

460

ಸೇತುವೆ

ಊರಿನಿಂದ ಮರಳಿದ್ದ ಆತನನ್ನು ಭೇಟಿ ಮಾಡಿದ.
"ಏನು ಸಮಾಚಾರ ಊರಲ್ಲಿ?" ಎಂದು ಕೇಳಿದ ಜಯದೇವ.
"ಏನಿಲ್ಲ."
"ಎಲ್ಲರೂ ಆರೋಗ್ಯವಾಗಿದಿರಾ?"
"ಹೂಂ."
"ಸತ್ಯವತಿಯಿಂದ ಕಾಗದ ಬಂದಿತ್ತಾ?"
ಆಗ ಮಾಧು ತಲೆಯೆತ್ತಿ ಅಣ್ಣನನ್ನು ನೇರವಾಗಿ ದಿಟ್ಟಿಸಿ ನೋಡುತ್ತ ಕೇಳಿದ:
"ಸತ್ಯವತಿ ಆಸ್ಪತ್ರೇಲಿ ಎರಡು ತಿಂಗಳಿದ್ಲು. ನಿನಗೆ ಗೊತ್ತೇ ಇಲ್ವ ಜಯಣ್ಣ?"
ಜಯದೇವನಿಗೆ ಗಾಬರಿಯಾಯಿತು.
"ಇಲ್ಲ. ಏನಾಯ್ತು?"
"ಹೆರಿಗೆಗೇಂತ ಬಂದಿದ್ಲು. ಆದರೆ ಮಗು ಸತ್ತು ಹುಟ್ತು. ಆಮೇಲೆ ಏನೇನೋ
ಆಗಿ ಬಹಳ ತೊಂದರೆಯಾಯ್ತಪ್ಪ ಅಂತೂ."
"ಅಯ್ಯೋ ಪಾಪ! ಈಗ ಚೆನ್ನಾಗಿದಾಳಾ?"
"ಹೂಂ. ನಮ್ಮನೇಲೇ ಇದಾಳೆ."
"ಅಪ್ಪಯ್ಯ ಆ ವಿಷಯ ನನಗೆ ಬರೀಲೇ ಇಲ್ಲ."
"ಮರೆತು ಬಿಟ್ರೂಂತ ಕಾಣುತ್ತೆ," ಎಂದ ಮಾಧು.
ಸ್ವಲ್ಪ ತಡೆದು ಆತ ಕೇಳಿದ:
"ಅತ್ತಿಗೇನೂ ಬಂದಿದಾರಾ?"
"ಹೂಂ."
"ಕಾನಕಾನಹಳ್ಳಿಗೆ ಹೋಗೊಲ್ವ ನೀನು? ಅಮ್ಮ ವಿಚಾರಿಸ್ತಾ ಇದ್ರು."
ಯಾವ ಮಾತುಗಳನ್ನು ಉಪಯೋಗಿಸಿ ಆಕೆ ವಿಚಾರಿಸಿರಬಹುದೆಂಬುದನ್ನು
ಊಹಿಸುವುದು, ಜಯದೇವನಿಗೆ ಕಷ್ಟವಾಗಲಿಲ್ಲ.
"ಇಲ್ಲ ಮಾಧೂ. ಈ ಸಲ ರಜಾ ಸಾಲದು. ಜನವರೀಲಿ ಹೋಗ್ತೀನಿ."
ಹೊರಡುವ ಹೊತ್ತಿನಲ್ಲಿ ಜಯದೇವ ಕೇಳಿದ:
"ವೇಣು ಮನೆಗೆ ಬರ್ತೀಯಾ?"
ಮಾಧವನಿಗೆ ಮನಸ್ಸಿರಲಿಲ್ಲ. ಆತನೆಂದ:
"ಇಲ್ಲ ಜಯಣ್ಣ. ನಾನು ಓದ್ಕೋಬೇಕು."
ಆ ಭೇಟಿಯ ಅನಂತರ ಜಯದೇವನ ಹೃದಯ ಭಾರವಾಯಿತು. ವಾಸ್ತವ
ವಾಗಿ, ಒಂದೇ ತಂದೆಯ ಮಕ್ಕಳು. ಆದರೆ ನೋಡಿದವರು, ಪರಸ್ಪರ ಪರಿಚಯ
ವಿದ್ದೀತು_ಎನ್ನಬೇಕು, ಅಷ್ಟೆ. ಕಾಂಡ ಒಂದೇ ಆದರೂ ಕೊಂಬೆಗಳು ಬೆಳೆಯು
ತ್ತಿದ್ದುದು ಬೇರೆಬೇರೆ ದಿಕ್ಕಿಗೆ. ದಿನ ಕಳೆದಂತೆ ಅವುಗಳ ನಡುವಿನ ಅಂತರ ಹೆಚ್ಚುತ್ತಲೆ
ಇತ್ತು.