ಪುಟ:ನವೋದಯ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

462

ಸೇತುವೆ

ಯಾಕೆ ಬೇಡವೆಂದರೆಂಬುದು ಮೊದಲು ಗಾಡಿಯವನಿಗೆ ಅರ್ಥವಾಗಲಿಲ್ಲ.
ಆದರೆ ಸೂಕ್ಷ್ಮ ಹೊಳೆದಾಗ, ಆತನನ್ನು ಕೆಣಕಿದಂತಾಯಿತು.
"ಕೂತ್ಕೊಂಡು ನೋಡಿ ಬುದ್ದಿ. ಅಮ್ಮಾವರಿಗೆ ರವಷ್ಟು ತಕ್ಲೀಫಾದರೂ
ಕಾಸು ತಗೊಣಾಕಿಲ್ಲ. ಇರುವೆ ಸಾಯ್ದಂಗೆ ಗಾಡಿ ಓಡಿಸ್ತೀನಿ."
"ಹಾಗಾದರೆ ಸರಿ," ಎಂದ ಜಯದೇವ.
ಬಸ್ ಪ್ರಯಾಣದಲ್ಲದಂತೂ ತೊಡೆಯಮೇಲೆಯೇ ಇರಿಸಿಕೊಂಡಿದ್ದ ರೇಡಿಯೋ
ಒಂದಿತ್ತು. ಅದನ್ನು ನೋಡಿ ಸುನಂದಾ ಲೇವಡಿಮಾಡಿದ್ದಳು: "ಮಗೂನ ಎತ್ಕೊಂಡ
ಹಾಗಿದೆ,' ಎಂದು. ಆ ಮಗುವನ್ನೊಮ್ಮೆ ನಂಜುಂಡಯ್ಯನವರ ಮನೆಯಲ್ಲಿಳಿಸಿ
ಬಿಟ್ಟರೆ ದೊಡ್ಡ ಭಾರ ಕೆಳಗಿಟ್ಟ ಹಾಗೆ__ಎಂದು ಜಯದೇವನಿಗೆ ಅನಿಸಿತ್ತು.
ಸುನಂದೆಯಷ್ಟೆ ಸೂಕ್ಷ್ಮ ಜೀವಿಯಾಗಿತ್ತು ರೇಡಿಯೋ ಕೂಡಾ.
ಗಾಡಿಯೊಳಗೆ ಕುಳಿತಾಗ ಜಯದೇವ ಹೇಳಿದ:
"ಮೆತ್ತಗೆ ಹೊಡಿಯಪ್ಪ."
"ಅದನ್ನ ನನಗ್ಬುಟ್ಬಿಡಿ ಬುದ್ದಿ. ಮನೆಗ್ತಾನೆ ಓಗೋದು? "
"ಹೂಂ. ಆದರೆ ಈ ರೇಡಿಯೋನ ನಂಜುಂಡಯ್ಯ ಮೇಸ್ಟ್ರ ಮನೇಲಿ ಇಳಿಸ್ಬಿಟ್ಟು
ಹೋಗ್ಬೇಕು."
"ಸೂಟಾಕ್ತಾರಲ್ಲ, ಆ ಮೇಸ್ಟ್ರು?"
"ಅವರೇನೆ."
"ಮನೆ ಗೊತ್ತೈತೆ, ಬನ್ನಿ."
ಸಾಮಾನ್ಯವಾಗಿ ನಾಗಾಲೋಟದಿಂದ ಓಡುವ ಜಟಕಾ, ಈ ದಿನ ಹೀಗೇಕೆ_
ಎಂದು ಊರವರು ಆಶ್ಚರ್ಯಪಟ್ಟರು. ಇಣಿಕಿ ನೋಡಿ ಜಯದೇವನನ್ನು ಗುರು
ತಿಸಿದ ಹುಡುಗರ ತಂದೆಯರು, ನಮಸ್ಕಾರವೆಂದರು.
ಗಾಡಿ ನಿಂತ ಸದ್ದು ಕೇಳಿ ಹೊರಬಂದ ನಂಜುಂಡಯ್ಯ ಬೀದಿಗಿಳಿದರು,
"ಹಲ್ಲೋ" ಎನ್ನುತ್ತ.
"ಸ್ನಾನಕ್ಕೆ ಹೊರಡೋಣಾಂತಿದ್ದೆ. ಅಷ್ಟರಲ್ಲೆ ಸದ್ದುಕೇಳಿಸ್ತು."
"ತಗೊಳಿಪ್ಪಾ," ಎಂದ ಜಯದೇವ.
ನಂಜುಂಡಯ್ಯ ಮಂದಹಾಸ ಬೀರಿ, ರಟ್ಟಿನ ಪೆಟ್ಟಿಗೆಯನ್ನೆತ್ತಿಕೊಂಡರು.
ಜಯದೇವನೂ ಗಾಡಿಯಿಂದಿಳಿದ.
ಸುನಂದೆಯತ್ತ ನೋಡುತ್ತ ನಂಜುಂಡಯ್ಯ ಕೇಳಿದರು,
"ಇಳಿಯೋದಿಲ್ವೆ?"
ಜಯದೇವನೇ ಹೇಳಿದ:
"ತಡವಾಗುತ್ತಲ್ಲ ಸಾರ್. ಬಟ್ಟೆ ಬದಲಾಯಿಸಿ ಸ್ಕೂಲಿಗೆ ಬಂದ್ಬಿಡ್ತೀನಿ."
"ಹಾಗೇ ಮಾಡಿ. ಒತ್ತಾಯಿಸೋದಿಲ್ಲ".