ಪುಟ:ನವೋದಯ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

332

ಸೇತುವೆ

"ಇನ್ನೇನು, ವೇಣು ಬರೋ ಹೊತ್ತು. ಆಗ್ಲೇ ಆರೂವರೆಯಾಯ್ತೂಂತ
ಕಾಣುತ್ತೆ. ಎಷ್ಟು ಬೇಗ್ನೆ ಕತ್ತಲಾಗುತ್ತೇಂತ ಈಗ."
ತಾಯಿ ಒಳ ಹೋದ ಬಳಿಕ ಮಗಳು ಬಂದಳು. ಕಣ್ಣುತುಂಬ ಪರಸ್ಪರರನ್ನು
ನೋಡುವುದರಲ್ಲಿ ಎರಡು ನಿಮಿಷ ಕಳೆಯಿತು.
ಜಯದೇವ ಕೇಳಿದ:
"ವೇಣುಗಿನ್ನೂ ಪರೀಕ್ಷೆ ಮುಗಿದಿಲ್ವ?"
"ಶನಿವಾರಕ್ಕೆ ಮುಗಿಯುತ್ತೆ. ಪ್ರ್ಯಾಕ್ಟಿಕಲ್ಲು ನಡೀತಾ ಇದೆ ಈಗ."
ಸುಮ್ಮನಿದ್ದು, ಸುನಂದೆಯನ್ನು ದಿಟ್ಟಿಸಿ ನೋಡಿ, ಬಳಿಕ ಗೋಡೆಯತ್ತ ತಿರುಗಿ
ಆತನೆಂದ:
"ನೀನು ಕಾಲೇಜಿಗೆ ಹೋಗ್ಲೇ ಇಲ್ಲ."
ಸುನಂದಾ ಉತ್ತರ ಕೊಡಲಿಲ್ಲ. ನೆಲ ನೋಡಿದಳು.
ಒಳಗಿನಿಂದ ತಾಯಿಯ ಧ್ವನಿ ಕೇಳಿಸಿತು.
"ಸುನಂದಾ, ಒಂದಿಷ್ಟು ಉಪ್ಪಿಟ್ಟು ಮಾಡ್ತಿಯೇನೆ?"
"ಹೂನಮ್ಮ," ಎನ್ನುತ್ತ ಸುನಂದಾ ಮರೆಯಾದಳು.
ಎಷ್ಟೊಂದು ದೊಡ್ಡವಳಾಗಿದ್ದಳು! ಅಂಗಾಂಗಗಳು ತುಂಬಿಕೊಂಡಿದ್ದುವು. ತನ್ನ
ಮಾಟವಾದ ಇರವನ್ನು ಸಾರುತ್ತಿತ್ತು ಎದೆ. ಆತನ ದೃಷ್ಟಿಯನ್ನು ಇದಿರಿಸುತ್ತ ಸೆರಗು
ಸರಿಪಡಿಸಿದ್ದಳು ಸುನಂದಾ.
...ಒಬ್ಬಳೇ ಇದ್ದಾಗ ಸುನಂದಾ ತೋರಿದ ಸಂಕೋಚ, ಆಕೆಯ ಅಣ್ಣ ವೇಣು
ಗೋಪಾಲ ಮನೆಗೆ ಬಂದಾಗ ಸ್ವಲ್ಪ ಕಡಮೆಯಾಯಿತು.
“ಇದೇನೇ ಇದು? ಪರಿಚಯವೇ ಇಲ್ದೋಳ ಹಾಗೆ ಮಾಡ್ತಿಯಲ್ಲೇ!" ಎಂದು
ವೇಣು ಪರಿಹಾಸ್ಯ ಮಾಡಿದ.
ಸಂಕೋಚ ಕಡಮೆಯಾದರೂ ಹಿಂದಿನ ಸಲಿಗೆ ಮತ್ತೆ ಮುಖ ತೋರಿಸಲಿಲ್ಲ.
ಒಬ್ಬರನ್ನೊಬ್ಬರು ನೋಡುತ್ತಿರಲು, ಸಮೀಪದಲ್ಲೆ ಇರಲು, ಮಾತನಾಡಲು
ಇಬ್ಬರಿಗೂ ಆಸೆಯಾಗುತ್ತಿತ್ತು. ಆದರೆ ಇಬ್ಬರಿಗೂ ಅರಿವಿಲ್ಲದಂತೆಯೆ ಮಾತಿನಲ್ಲಿ
ನೋಟದಲ್ಲಿ ಗೋಪ್ಯ ಸುಳಿಯುತ್ತಿತ್ತು.
ವೇಣು ಬಲು ಆಸಕ್ತಿಯಿಂದ ಸ್ನೇಹಿತನ ಮಾತುಗಳಿಗೆ ಕಿವಿಗೊಟ್ಟ. ಕತ್ತಲಾಗಿ
ದೀಪಹತ್ತಿಕೊಂಡು ಹೊತ್ತು ಬಹಳವಾದರೂ ಜಯದೇವನ ಕಥನ ಮುಗಿಯಲಿಲ್ಲ.
ಗೆಳೆಯ ಓದು ಮುಂದುವರಿಸಲು ನಿರ್ಧರಿಸಿದನೆಂದು ವೇಣುವಿಗೆ ಸಂತೋಷವಾಗಿತ್ತು.
ಆದರೆ ಓದು ಮುಗಿಸಿದ ಬಳಿಕ ಅದೇ ಹಳ್ಳಿಗೆ ಉಪಾಧ್ಯಾಯನಾಗಿ ಮತ್ತೆ ಹೋಗಲು
ಜಯದೇವ ಮಾಡಿದ್ದ ನಿರ್ಧಾರ ಮಾತ್ರ ತಮಾಷೆಯಾಗಿ ಕಂಡಿತು.
"ಅಂತೂ ಹುಡುಗೀರಿಗೂ ಪಾಠ ಹೇಳ್ತಾ ಇದ್ದೆ ಅನ್ನು," ಎಂದ ವೇಣು,
ಕೀಟಲೆ ಮಾಡುವ ಧ್ವನಿಯಲ್ಲಿ, ತಂಗಿಯ ಕಡೆಗೊಮ್ಮೆ ನೋಡಿ.