ಪುಟ:ನವೋದಯ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

467

ನಂಜುಂಡಯ್ಯನವರ ಕೈಗಿತ್ತು, 'ಇದು ಬಹಳ ಒಳ್ಳೆಯ ಸೆಟ್ ಸಾರ್,' ಎಂದು ಹೇಳಿ,
ಆಗಿನ್ನೂ ಅರ್ಧ ದಿನವಾಗಿರಲಿಲ್ಲ. ಅಷ್ಟರಲ್ಲೇ__
ನಂಜುಂಡಯ್ಯನ ಮುಖ ಕಪ್ಪಿಟ್ಟಿತು.
"ಇನ್ನೊಂದ್ಸಲ ಸರಿಯಾಗಿ ನೋಡಿ," ಎಂದರು.
ಮತ್ತೊಮ್ಮೆ ದೃಷ್ಟಿ ಹಾಯಿಸಿ ಆ ತಜ್ಞನೆಂದ:
"ಊಹೂಂ. ಮಿಸ್ಟೀಕಿರೋದು ಮಿಶಿನ್ನಲ್ಲೇ."
ನಿರಾಶೆಗೊಂಡ ನಂಜುಂಡಯ್ಯನವರ ಮುಖ ಮೆಲ್ಲನೆ ಜಯದೇವನೆಡೆಗೆ
ತಿರುಗಿತು.
ಹೀಗಾಯಿತಲ್ಲ ಎಂದು ತುಂಬಾ ಕೆಡುಕೆನಿಸಿತು ಜಯದೇವನಿಗೆ. ಆತ ಎದ್ದು
ತಾನೂ ಒಮ್ಮೆ ಸೂಕ್ಷ್ಮವಾಗಿ ಪರೀಕ್ಷಿಸಿದ. ಸಂದೇಹ ಮೂಡಿತು. ಹಿಂಭಾಗವನ್ನೇ
ನೋಡಿದ.
ವಿದ್ಯುತ್ತಿನ ಪ್ಲಗ್ಗು ಏರಿಯಲಿನೊಳಹೊಕ್ಕಿತ್ತು, ಅಷ್ಟೆ!
ಅದನ್ನು ಸರಿಪಡಿಸಿದಾಗ__
ಮದ್ರಾಸು ನಿಲಯದಿಂದ ಕೋಕಿಲವಾಣಿಯ ಕಂಠ ಕೇಳಿಸಿತು.
ಮುಗುಳುನಗುತ್ತ ಜಯದೇವ ತಮ್ಮನ್ನು ನೋಡುತ್ತಿದ್ದಂತೆ, ನಂಜುಂಡಯ್ಯ
ಸೂಚಿಯನ್ನು ಎಡಬಲಗಳಿಗೆ ಸರಿಸಿ ಕೊನೆಗೊಮ್ಮೆ ಬೆಂಗಳೂರಿಗೆ ಬಂದರು. ಅಲ್ಲಿ
ಗ್ರಾಮಸ್ಥರಿಗಾಗಿ, ಕಾರ್ಯಕ್ರಮ ನಡೆಯುತ್ತಿತ್ತು.
ಮುಖಭಂಗವಾಗಿದ್ದರೂ ವಿದ್ಯುತ್ ತಜ್ಞ ತನ್ನ ಮಾನ ರಕ್ಷಣೆಗಾಗಿ ಹೋರಾಡಿದ.
"ಈಗಿನ ಸೆಟ್ಟುಗಳೇ ಹೀಗೆ ಸಾರ್. ಎಲ್ಲಾ ಹೊಸ ಹೊಸ ರೀತಿ ಬಂದ್ಬಿಡುತ್ತೆ."
ಆ ಏರ್ಪಾಟಿನಲ್ಲಿ ಹೊಸತೇನೂ ಇರಲಿಲ್ಲವೆಂಬುದು ಜಯದೇವನಿಗೆ ಗೊತ್ತಿತ್ತು.
"ಹೊಸ ರೀತಿ ಇಲ್ಲದೆ ಹೋದರೂ ಒಂದೊಂದ್ಸಲ ಅವಸರದಲ್ಲಿ ಹೀಗಾಗೋದು
ಸ್ವಾಭಾವಿಕ," ಎಂದು ಹೇಳಿ ಜಯದೇವ ಸುಮ್ಮನಾದ.
ಆ ಸಂಜೆ ನಂಜುಂಡಯ್ಯನವರ ಕೊಠಡಿ ಜನರಿಂದ ತುಂಬಿತು. ಅವರ ಇಬ್ಬರು
ಮಕ್ಕಳಂತೂ ರೇಡಿಯೊವನ್ನಿರಿಸಿದ್ದ ಮೇಜಿನ ಬಳಿಯಲ್ಲೆ ನಿಂತರು. ಹಚ್ಚಿದ ಅವಲಕ್ಕಿ
ಯನ್ನು [ಕಾಫಿಗಿಂತ ಸುಲಭವಾದ] ಪಾನಕವನ್ನೂ ತಂದು ತಂದು ಬಾಗಿಲ ಹೊರ
ಗಿಡುತ್ತಿದ್ದ ಪಾರ್ವತಮ್ಮ, ತಮ್ಮ ಸಂತೋಷವನ್ನು ಬಚ್ಚಿಡಲಾರದೆ ತಾವೂ ಒಮ್ಮೊಮ್ಮೆ
ಹೊರಗಿಣಿಕುತ್ತಿದ್ದರು. ನಂಜುಂಡಯ್ಯ ತರಿಸಿದ್ದ ರೇಡಿಯೊವನ್ನು ನೋಡಿ ಹೋಗ
ಲೆಂದು ಬಂದ ಶಂಕರಪ್ಪನವರೆಂದರು:
"ನಮ್ಮ ಮನೇಲಿರೋದು ಜಿ. ಇ. ಸಿ. ದೊಡ್ಡ ಸೈಜಿಂದು. ಇದೂ ಚೆನ್ನಾಗೇ
ಇದೆ. ಪರವಾಗಿಲ್ಲ."
ಜಯದೇವನ ಕಡೆ ತಿರುಗಿ, "ಮೇಸ್ಟ್ರು ಒಳ್ಳೇದನ್ನೇ ಆರಿಸಿ ತಂದಿದಾರೆ," ಎಂದು
ಪ್ರಮಾಣ ಪತ್ರವನ್ನು ಅವರು ಕೊಟ್ಟರು.