ಪುಟ:ನವೋದಯ.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

468

ಸೇತುವೆ

...ಜಯದೇವ ಮನೆಗೆ ಹೊರಟಾಗ ರಾಮಾಚಾರಿಯೂ ಆತನ ಜತೆ ಬಂದ.
ಆನಂದ ವಿಲಾಸದಲ್ಲಿ ಕೊಠಡಿ ಗೊತ್ತು ಮಾಡಿ, ಅಲ್ಲಿಯೇ ಊಟಕ್ಕಿದ್ದ ಆತ.
"ಹೋಟೆಲು ಊಟ. ಸ್ವಲ್ಪ ಹುಷಾರಾಗಿರ್ಬೇಕು ಕಣ್ರೀ," ಎಂದ ಜಯದೇವ.
"ಏನೂ ದೊಡ್ಡದಲ್ಲ. ನನಗೆ ಈಗಾಗ್ಲೇ ಅಭ್ಯಾಸವಾಗ್ಬಿಟ್ಟಿದೆ," ಎಂದು
ರಾಮಾಚಾರಿ ಉತ್ತರವಿತ್ತ.
"ಈ ಊರು ಇಷ್ಟವಾಯ್ತೆ ನಿಮಗೆ?"
"ಇಷ್ಟವಾಯ್ತೊ ಇಲ್ವೊ_ನಮ್ಮ ಮಾತು ಏನು ನಡೆಯುತ್ತೆ? ಬ್ರಾಹ್ಮಣರಿಗೆ
ಯಾರಿದಾರೆ ಸಾರ್ ಸಹಾಯ ಮಾಡೋರು? ಎಲ್ಲಾ ನಮ್ಮ ಗೋಣು ಮುರಿಯೋ
ಜನರೇ ಹೊರತು_"
"ಒಂದೊದ್ಸಲ ಅನ್ಯಾಯ ಕಂಡಾಗ, ತುಂಬಾ ಬೇಜಾರಾಗುತ್ತೆ. ಒಪ್ಕೊತೀನಿ."
"ಒಂದೊಂದ್ಸಲ ಎಂಥಾದ್ದು? ಯಾವಾಗಲೂ ಅನ್ಯಾಯವೇ. ಬ್ರಾಹ್ಮಣ
ಅಂದರೆ ಇವರ ದೃಷ್ಟೀಲಿ ನಾಯಿಗೆ ಸಮಾನ. ವಿದ್ಯೆಬಾರದವರದೇ ಇವತ್ತು ರಾಜ್ಯ.
ಅವರು ಮಾತಾಡೋ ರೀತಿ ನೋಡಿ. ಒಂದು ಪದವಾದರೂ ಅವರ ನಾಲಿಗೆಯಿಂದ
ಸರಿಯಾಗಿ ಹೊರಡುತ್ತೇನು?"
ಮುಖ್ಯ ಬೀದಿಯನ್ನು ಆಗಲೇ ಅವರು ದಾಟಿ ಬಂದಿದ್ದುದರಿಂದ, ಮುಖದ
ಮೇಲೆ ಅಂಗಡಿಗಳ ಬೆಳಕು ಬೀಳುತ್ತಿರಲಿಲ್ಲ. ರಾಮಾಚಾರಿಯ ಮಾತು ಕೇಳಿ ಜಯ
ದೇವ ಬಲು ಬೇಸರಗೊಂಡ. ಮನೆಯವರೆಗೂ ಆತನನ್ನು ಕರೆದೊಯ್ಯಬೇಕು;
ಇದ್ದುದನ್ನೆ ಆತನಿಗೂ ಬಡಿಸಿದರಾಯಿತು_ಎಂದೆಲ್ಲ ಆತ ಯೋಚಿಸಿದ್ದ. ಆದರೆ ಈಗ,
ಈ ಮಾತುಗಳಾದ ಬಳಿಕ, ರಾಮಾಚಾರಿಯ ಸಹವಾಸ ಆತನಿಗೆ ಬೇಕೆನಿಸಲಿಲ್ಲ.
ಜಯದೇವನೊಮ್ಮೆ ನಿಟ್ಟುಸಿರು ಬಿಟ್ಟು ಹೇಳಿದ:
"ಇದು ಸರಿಯಾದ ದೃಷ್ಟೀಂತ ನಾನು ಭಾವಿಸೋದಿಲ್ಲ ರಾಮಾಚಾರ್. ವಿದ್ಯೆ
ಯೆಲ್ಲ ಬ್ರಾಹ್ಮಣನ ಸೊತ್ತು ಅನ್ನೋ ಕಾಲ ಕಳೀತು. ಅಂಥ ವಾದ ಸರಿಯಲ್ಲ.
ಸಮಾಜದ ಕೆಲಸ ಕಾರ್ಯಗಳು ಸರಿಯಾಗಿ ನಡೀಲೀಂತ ಹಿಂದೆ ವರ್ಣಭೇದಗಳನ್ನು
ಮಾಡಿದರು. ಜವಾಬ್ದಾರೀನ ಹಂಚಿದರು. ಆಗಿನ ಸಮಾಜಕ್ಕೆ ಅದು ಸರಿಯಾಗಿತ್ತು.
ಆದರೆ ಈಗಿನ ಸಮಾಜವ್ಯವಸ್ಥೆಗೆ ಸರಿಹೋಗುತ್ತೇನು?"
ಜಯದೇವನ ವ್ಯಾಖ್ಯಾನ ರಾಮಾಚಾರಿಗೆ ಇಷ್ಟವಿರಲಿಲ್ಲ. ಆತನೆಂದ:
"ನೀವು ಏನೇ ಹೇಳಿ ಸಾರ್. ಅಲ್ಪಸಂಖ್ಯಾತರನ್ನ ಬಹುಸಂಖ್ಯಾತರು ತುಳೀ
ಬಹುದು ಅನ್ನೋದು ಎಲ್ಲಿದೆ?"
"ಅದು ತಪ್ಪು. ಆದರೆ, ಅಲ್ಪ ಸಂಖ್ಯಾತರು ಅನ್ನೋರು ಯಾರು? ಮಂತ್ರಿ
ಮಂಡಲದಲ್ಲಿ ಬ್ರಾಹ್ಮಣರಿಲ್ವೇನು? ದೊಡ್ಡ ದೊಡ್ಡ ಹುದ್ದೆಗಳಲ್ಲಿ ಬ್ರಾಹ್ಮಣರಿಲ್ವೇನು?
ಬ್ರಾಹ್ಮಣರಿಗೆ ಅನ್ಯಾಯವಾಗಿದೆ ಎನ್ನುವಾಗ ಅವರನ್ನು ಬಿಟ್ಟು ತಾನೆ ನೀವು
ಹೇಳೋದು?"