ಪುಟ:ನವೋದಯ.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

469

"ಅಂಥವರು ಜಾತಿದ್ರೋಹಿಗಳು!"
"ಇಲ್ಲ ರಾಮಾಚಾರ್. ಬಡವರು ಎಲ್ಲಾ ಜಾತಿಗಳಲ್ಲಿ ಸಿಗ್ತಾರೆ. ಪ್ರತಿಯೊಂದು
ಜಾತೀಲೂ ಅವಕಾಶ ಸಿಗದೆ ನರಳ್ತಿರೋರಿದಾರೆ. ಆದರೆ ಆಳುವವರ ದೃಷ್ಟಿ ಸಂಕುಚಿತ
ವಾಗಿರೋದರಿಂದ ಕೆಲವರಿಗೆ ಹೆಚ್ಚು_ಕೆಲವರಿಗೆ ಕಡಮೆ_ಅನ್ಯಾಯವಾಗ್ತಿದೆ."
"ಅದು ನಿಮ್ಮ ಅಭಿಪ್ರಾಯ."
ಜಯದೇವ ಒಂದು ನಿಮಿಷ ಸುಮ್ಮನಿದ್ದು, ಸಣ್ಣನೆ ನಕ್ಕು, ಹೇಳಿದ:
"ಅಲ್ಲ, ಕನಾರ್ಟಕ ಪ್ರಾಂತವೇ ಬೇಡಾಂತ ನೀವು ಹೇಳಿದಿರಂತಲ್ಲಾ? ಕಾರಣ?"
"ಪ್ರತ್ಯೇಕವಾಗಿ ಬ್ರಾಹ್ಮಣ ಜೀವಿಸೋದು ಸಾಧ್ಯವಿಲ್ಲಾಂತ ನಾನು ತೀರ್ಮಾನಕ್ಕೆ
ಬ೦ದಿದೀನಿ. ನಾವು ಯಾವುದಾದರೂ ಬಲಿಷ್ಠ ಗುಂಪಿನ ಕಡೆ ಸೇರ್‍ಕೋಬೇಕು.
ಲಿಂಗಾಯತರಂತೂ ನಮ್ಮನ್ನ ಹತ್ತಿರ ಸೇರಿಸೋದಿಲ್ಲ, ಈಗ ಒಕ್ಕಲಿಗರಿಗೂ ಲಿಂಗಾಯ
ತರಿಗೂ ವೈಷಮ್ಯ ಇರೋದರಿ೦ದ ನಾವು ಒಕ್ಕಲಿಗರ ಪಕ್ಷ ವಹಿಸ್ಬೇಕು."
ಕಚ್ಚುವ ಇರುವೆಗಳು ಎರಡೂ ಪಾದಗಳನ್ನು ಒಮ್ಮೆಲೇ ಮುತ್ತಿ ಕುಟುಕಿ,
ಮೇಲೇರಿದಂತಾಯಿತು ಜಯದೇವನಿಗೆ. ಎದುರಲ್ಲಿ ಎರಡು ಹಾದಿಗಳು ಕವಲೊಡೆ
ಯುತ್ತಿದ್ದುವು. ಅಲ್ಲಿ ಆತ ನಿಂತ.
ಮನೆಯವರೆಗೂ ಜಯದೇವನ ಜತೆ ಹೋಗಲು ನಿರ್ಧರಿಸಿದ್ದ ರಾಮಾಚಾರಿ
ನಿರುಪಾಯನಾಗಿ ತಾನೂ ನಿಲ್ಲಬೇಕಾಯಿತು.
ಜಯದೇವನೆಂದ:
"ನೀವು ರಾಜಕೀಯದಲ್ಲಿ ಇರ್‍ಬೇಕಾಗಿತ್ತು ರಾಮಾಚಾರಿ. ಅಪ್ಪಿತಪ್ಪಿ ಉಪಾ
ಧ್ಯಾಯವೃತ್ತಿಗೆ ಇಳಿದಿರಿ."
"ರಾಜಕೀಯದಲ್ಲಿ ಮುಂದೆ ಬರೋದಕ್ಕೆ ಅವಕಾಶ ಸಿಕ್ಕಿದ್ರೆ, ಈ ವೃತ್ತಿಗೆ ನಾನಾ
ದರೂ ಯಾಕೆ ಬರ್‍ತಿದ್ದೆ?"
ಅಷ್ಟೆ, ವೃತ್ತಿಯ ಮೇಲೆ ಆತನಿಗಿದ್ದ ಪ್ರೀತಿ, ಗೌರವ.
"ನೀವು ಯಾವ ಉದ್ದೇಶದಿಂದ ವೀರಮೈಸೂರಿಗರಾಗಿದೀರೀಂತ ಲಕ್ಕಪ್ಪ
ಗೌಡರಿಗೆ ಹೇಳ್ಲೇನು?"
"ಅಂಥ ಕೆಲಸ ನೀವು ಮಾಡಲಾರಿರೀಂತ ನನಗೆ ಗೊತ್ತು ಸಾರ್. ಏನೇ ಹೇಳಿ
ದರೂ ಕುಲ ಅನ್ನೋದು-"
"ನನ್ನದು ಮಾನವ ಕುಲ ರಾಮಾಚಾರಿ."
"ನನ್ನದೇನು ದಾನವ ಕುಲವೆ?"
"ಇಂತಹ ಚರ್ಚೆ ನನಗಿಷ್ಟವಿಲ್ಲ. ಇನ್ನು ಮುಂದೆ ಯಾವಾಗಲೂ ನಮ್ಮ ಮಾತು
ಕತೇಲಿ ಇದೊಂದು ವಿಷಯ ಬಿಟ್ಟುಬಿಡೋಣ."
"ಆಗಲಿ ಸಾರ್. ಶುರುವಿನ ಭೇಟೀಲೆ ಇಷ್ಟೆಲ್ಲ ಮಾತಾಡಿದ್ವಿ. ಏನೂ ತಪ್ಪು
ತಿಳ್ಕೊಬೇಡಿ."