ಪುಟ:ನವೋದಯ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

333

"ಎಂಥೆಂಥ ಹುಡುಗೀರು ಇದ್ದರೂಂತ! ಆವತ್ತೆ ಬರೆದಿರ್ಲಿಲ್ವೆ ನಾನು?"
"ಬರೆದಿದೆ ಕಣಯ್ಯ. ಇಲ್ಲಾ ಅಂದ್ನೆ? ಪುನಃ ಅಲ್ಲಿಗೇ ಹೋಗ್ಬೇಕೂಂತ ಹಟ
ತೊಟ್ಟಿದೀಯಲ್ಲ,ಅದಕ್ಕಂದೆ!"
ಆ ನಗೆಮಾತುಗಳನ್ನು ಕೇಳಿ ಸಹಿಸುವ ಧೈರ್ಯವಿದ್ದರೂ ಆ ನಿಮಿಷದಲ್ಲಿ
ಸುನಂದಾ ಸೋತು ಹೋದಳು. ಬದಲಾಗುತ್ತಿದ್ದ ಮುಖದ ಛಾಯೆಯನ್ನು ಮರೆ
ಮಾಚಲಾರದೆ ತಟ್ಟನೆದ್ದು ಆಕೆ ಒಳನಡೆದಳು.
ಅದನ್ನು ದಿಟ್ಟಿಸಿ, ನಕ್ಕು, ವೇಣು ನುಡಿದ:
"ನೋಡಿದೆಯೇನೋ. ಮತ್ಸರ ಅನ್ನೋದು ಸ್ತ್ರೀ ಜಾತಿಗೆ ರಕ್ತಗತವಾಗಿರುತ್ತೆ!"
ಜಯದೇವನ ಮುಖ ಕೆಂಪಗಾಯಿತು. ಆದರೆ ಆ ಭಾವವಿಕಾರವನ್ನು ಸ್ನೇಹಿತ
ಕಂಡುಹಿಡಿಯಬಾರದೆಂದು ಆತ ಗಟ್ಟಿಯಾಗಿ ನಕ್ಕ.
ವೇಣುವಿನ ತಂದೆ ಶ್ರೀಪತಿರಾಯರು ಕ್ಲಬ್ಬಿನಿಂದ ಎಂದಿನಂತೆ ತಡವಾಗಿ
ಬಂದರು. ಜಯದೇವನನ್ನು ಕಂಡು ಅವರಿಗೆ ಸಂತೋಷವಾಯಿತು. ಆಠಾರಾ
ಕಚೇರಿಯಲ್ಲಿ ಹಿರಿಯ ಗುಮಾಸ್ತೆಯಾಗಿ, ರಾಜ್ಯ ಯಂತ್ರದ ಸಹಸ್ರ ಕೀಲಿಗಳಲ್ಲಿ
ಒಂದಾಗಿ, ನಿವೃತ್ತರಾದವರು ಅವರು. ದೊರೆಯುತ್ತಿದ್ದ ವಿರಾಮ ವೇತನ ಅತ್ಯಲ್ಪ.
ಆದರೆ ಪಿತ್ರಾರ್ಜಿತವಾಗಿ ಬಂದಿದ್ದ, ತಕ್ಕ ಮಟ್ಟಿಗೆ ಪ್ರಶಸ್ತವಾಗಿದ್ದ, ಮನೆ ಇತ್ತು.
ಬಾಡಿಗೆ ಕೊಡಬೇಕಾದುದಿರಲಿಲ್ಲ. ಹಳ್ಳಿಯಲ್ಲಿ ಹೊಲವಿತ್ತು-ಎಂಟು ಎಕರೆ. ರೈತ
ಮನಸ್ಸು ಮಾಡಿದ ವರ್ಷ, ಪ್ರಕೃತಿಯೂ ಮುನಿಯದೆ ಇದ್ದರೆ, ಒಂದಿಷ್ಟು ಅಕ್ಕಿ ಬರು
ತ್ತಿತ್ತು. ಆ ತೊಂದರೆಗಳೇನಿದ್ದರೂ ಔದಾರ್ಯದ ವಿಷಯದಲ್ಲಿ ಮಾತ್ರ ಅವರು
ಬಡವರಾಗಿರಲಿಲ್ಲ. ಸದ್ಗುಣಿಯಾದ ಜಯದೇವ ಅವರ ಮನಸ್ಸನ್ನು ಸೆಳೆದುದು
ಸ್ವಾಭಾವಿಕವಾಗಿತ್ತು.
ಅವರು ಕೇಳಿದರು:
"ಹಳ್ಳಿ ಬೇಸರ ಬಂತೇನಪ್ಪಾ?"
"ಏನೇನೂ ಇಲ್ಲ, ಸಾರ್."
ಜಯದೇವನ ವಿಚಾರಗಳನ್ನು ತಿಳಿದಾಗಲಂತೂ ಅವರ ಕಣ್ಣುಗಳಲ್ಲಿ ನಗೆ
ಮಿಂಚಿತು.
"ಒಳ್ಳೆದಪ್ಪಾ. ಸಾಹಸಿಗಳನ್ನು ಕಂಡರೆ ನನಗೆ ಯಾವಾಗಲೂ ಇಷ್ಟ.
ನೋಡೋ ವೇಣು. ಕಲಿತ್ಕೋ. ಇನ್ನೊಂದು ವರ್ಷವಾದ್ಮೇಲೆ ನೀನೂ ಉದ್ಯೋಗ
ಹುಡುಕಿಕೊಂಡು ಆಖಾಡಕ್ಕಿಳೀತೀಯ."
"ಏನೇ ಆದರೂ ಮೇಸ್ಟ್ರ ಕೆಲಸವೊಂದು ಬೇಡವಪ್ಪಾ ನಂಗೆ!" ಎಂದು
ವೇಣು ನಕ್ಕ.
"ನಮ್ಮ ಹಣೇಲಿ ಬರೆದಿದ್ದು ಬಿ. ಎಸ್. ಸಿ. ಕೋರ್ಸೇ. ಏನು ಮಾಡೋಣ
ಹೇಳು?" ಎಂದು ಶ್ರೀಪತಿರಾಯರು ನಿಟ್ಟುಸಿರುಬಿಟ್ಟರು. ಮಗನಿಗೆ ತಾಂತ್ರಿಕ ಶಿಕ್ಷಣ