ಪುಟ:ನವೋದಯ.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

483

ನೆನಪಾಯಿತು.... ಇಲ್ಲ_ಎಂದಿದ್ದು ಸುಳ್ಳೆ. ಎಷ್ಟೊಂದು ಆಯಾಸವಾಗಿತ್ತು ತನಗೆ!
ಈ ತಾಯಿಯ ಮಡಿಲಲ್ಲಿ ಮುಖವಿರಿಸಿ ನಿದ್ದೆ ಹೋಗುವುದು ಎಷ್ಟು ಚೆನ್ನು!
"ಹಾಡ್ತೀಯಾ ಸುನಂದಾ?" ಎಂದು ಜಯದೇವ ಹೆಂಡತಿಯನ್ನು ಕೇಳಿದ,
ತುಂಟತನದಿಂದ ಕಣ್ಣು ಮಿಟಿಕಿಸುತ್ತ.
"ನೋಡ್ರಿ, ಗೇಲಿಮಾಡ್ತಿದಾರೆ," ಎಂದು ಸುನಂದಾ 'ಅಮ್ಮ'ನಿಗೆ ದೂರು
ಕೊಟ್ಟಳು.
"ಒಂದೆರಡು ಹಾಡ್ಹೇಳಿ ಸುನಂದಕ್ಕಾ." ಎಂದು ಇಂದಿರೆಯೂ ರಾಗವೆಳೆದಳು....
"ಬರೋಲ್ರೀ ನನಗೆ," ಎಂದಳು ಸುನಂದಾ.
ಆ ಮಾತು ಅಲ್ಲಿಗೆ ನಿಂತಿತು.
ಇಂದಿರೆಯ ತಾಯಿ ಅಂದರು:
"ನಮ್ಮ ಮನೆ ಊರಿನ ಒಂದು ಕಡೇಲಾದರೆ, ನಿಮ್ಮ ಮನೆ ಇನ್ನೊಂದು ಕಡೆ.
ಇಷ್ಟು ದೂರ ಬರಬೇಕಾದರೆ ಸಾವಿರಾರು ಕಣ್ಣುಗಳನ್ನು ದಾಟಿ ಬರಬೇಕು. ಸಾಕಾಗಿ
ಹೋಗುತ್ತೆ."
ಕಣ್ಣುಗಳ ವಿಷಯದಲ್ಲಿ ಸುನಂದೆಗೆ ಇದ್ದ ಅಭಿಪ್ರಾಯವೂ ಅದೇ. ಆಕೆ
ಯೆಂದಳು:
"ನಿಜ ಕಣ್ರೀ. ಇಲ್ಲಿಯ ಜನ ಹ್ಯಾಗೆ ದುರದುರನೆ ನೋಡ್ತಾರೇಂತ."
ಜಯದೇವನೆಂದ:
"ಹಾಗೆ ನೋಡುವವರು ಎಲ್ಲಾ ಕಡೇನೂ ಇರ್ತಾರೆ. ಏನ್ಮಾಡೋಣ ಹೇಳಿ?"
ಇಂದಿರೆಯ ತಾಯಿ ಆ ಮಾತನ್ನು ಅಲ್ಲಗಳೆಯಲಿಲ್ಲ.
"ಅದು ಸರಿ ಅನ್ನಿ. ಆದರೂ ಒಂದೊಂದ್ಸಲ ತುಂಬಾ ಬೇಜಾರಾಗ್ಬಿಡುತ್ತೆ."
ಹಾಗೆ, ಸುಖದುಃಖದ ಮಾತು ಬಂತು.
ಅವರ ಹೊಲದ ಪ್ರಶ್ನೆ ಹೆಚ್ಚು ತೊಡಕಿನದೇನೂ ಆಗಿರಲಿಲ್ಲ.
"ಗೇಣಿಗೆ ತೊಗೊಂಡಿರೋ ಇಬ್ಬರೂ ಒಳ್ಳೆಯವರೇ. ಆದರೂ ಎಷ್ಟು ದಿವಸಾಂತ
ಹೀಗೆಯೇ ಇರೋಕಾಗುತ್ತೆ? ಅದೇನೋ ಹೊಸ ಕಾನೂನು ಬೇರೆ ಬರುತ್ತಂತಲ್ಲ. ಈ
ಹೊಲಮನೇನೆಲ್ಲ ಮಾರಿ ಬೆಂಗಳೂರಿನಂಥ ಊರಿಗೆ ಹೋಗಿ ಇದ್ಬಿಡೋಣ ಅನಿಸುತ್ತೆ
ಒಮ್ಮೊಮ್ಮೆ..."
ಅನುಭವದಿಂದ ಹೊರಟಿದ್ದ ಆ ಮಾತುಗಳಲ್ಲಿ ಸತ್ಯಾಂಶವಿತ್ತು.
ಜಯದೇವನೆಂದ:
"ಬೆಂಗಳೂರಿಗೆ ಹೋಗಿ ನೆಲೆಸೋದೇನೂ ದೊಡ್ಡ ವಿಷಯವಲ್ಲ. ಆದರೆ,
ಆದಷ್ಟು ಕಾಲ ಇಲ್ಲಿಯೇ ನೀವು ಇರಬಹುದಲ್ಲಾ? ಇನ್ನೊಂದು ವರ್ಷದೊಳಗಂತೂ
ನಂಜುಂಡಯ್ಯನವರ ಹೈಸ್ಕೂಲು ಶುರುವಾಗಿಯೇ ಆಗುತ್ತೆ."
ಇಂದಿರೆಯ ತಾಯಿ ಸಣ್ಣನೆ ನಕ್ಕರು.