ಪುಟ:ನವೋದಯ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

334

ಸೇತುವೆ


ಕೊಡಿಸಬೇಕು, ಎಂಜಿನಿಯರಿಂಗ್ ಓದಿಸಬೇಕು, ಎಂದು ಅವರು ತುಂಬಾ ಆಸೆಪಟ್ಟಿ
ದ್ದರು. ಆದರೆ ಸೀಟು ದೊರೆತಿರಲಿ‍ಲ್ಲ. ಆ ಸದಸ್ಯರ ಈ ಸದಸ್ಯರ ಕಾಲುಕಟ್ಟಿ ಕೇಳಿ
ಕೊಂಡುದೆಲ್ಲ ವ್ಯರ್ಥವಾಗಿತ್ತು.
ಸುನಂದೆಯ ತಾಯಿ, ಜಯದೇವನಿಗೆ ಗತಿಸಿದ ಅಮ್ಮನ ನೆನಪು ಮಾಡಿಕೊಟ್ಟರೆ,
ಶ್ರೀಪತಿರಾಯರನ್ನು ನೋಡಿದಾಗಲೆಲ್ಲ ತನ್ನ ತಂದೆಯ ಚಿತ್ರ ಆತನ ಕಣ್ಣಿಗೆ ಕಟ್ಟು
ತಿತ್ತು. ಅದು ಕನಕಪುರದ ಕರೆ. ವಾಸ್ತವವಾಗಿ ನೋಡಿದರೆ, ನೇರವಾಗಿ ಅಲ್ಲಿಗೇ
ಹೋಗಬೇಕಿತ್ತು ಆತ. ಆದರೆ ಅಲ್ಲಿ ಆತನಿಗಾಗಿ ಯಾವ ವಾತ್ಸಲ್ಯ ಕಾದಿತ್ತು? ತಿಳಿವಳಿಕೆ
ಬ೦ದಂದಿನಿಂದ, ಮಲತಾಯಿ ಅಧಿಕಾರಿಣಿಯಾಗಿದ್ದ ಆ ಮನೆ ಜಯದೇವನಿಗೆ ಮೋಹಕ
ವಾಗಿ ಕಂಡಿರಲಿಲ್ಲ. ಅದು ಎಷ್ಟಿದ್ದರೂ ಅವನ ಪಾಲಿಗೆ ನಾಲ್ಕು ದಿನ ಹೋಗಿ ಇದ್ದು
ಬರಬೇಕಾದ ಸಂಬಂಧಿಕರ ಮನೆ.
ಈ ರೀತಿಯ ಅನಾಸಕ್ತಿ ಆವರಿಸಿದ್ದರೂ ತಂದೆಯನ್ನು ಕಾಣಬೇಕು ಎನಿಸು
ತ್ತಿತ್ತು ಆತನಿಗೆ ಒಮೊಮ್ಮೆ. ಹಾಗೆಯೇ ತನ್ನ ತಮ್ಮನ, ತಂಗಿಯ, ನೆನಪಾಗುತ್ತಿತ್ತು.
ವೇಣುವಿನ ಮನೆಯಲ್ಲಿ ಎರಡು ದಿನಗಳಿದ್ದ ಬಳಿಕ ಜಯದೇವ ಹೇಳಿದ:
"ಕಾನಕಾನಹಳ್ಳಿಗೆ ಹೋಗ್ಬಿಟ್ಟು ಬರ್ತಿನಿ, ಅಮ್ಮ."
ಸುನಂದೆಯ ತಾಯಿ ಅಂದರು:
“ನಾನು ಆ ವಿಷಯವೇ ಕೇಳೋಣಾಂತಿದ್ದೆ ಕಣೋ."
ಜಯದೇವ ಹತ್ತು ರೂಪಾಯಿಗಳ ಹತ್ತು ನೋಟು ಅವರ ಮುಂದಿರಿಸಿದ.
“ತಗೊಳ್ಳಿ. ನನ್ನ ಸಂಪಾದ್ನೇಲಿ ಮಿಗಿಸಿದ್ದು. ಬೇಕಾದಾಗ ಕೇಳಿ ಇಸ್ಕೋತಿನಿ."
"ಯಾಕಪ್ಪಾ, ನಿನ್ನ ಮನೆಗೆ ತಗೊಂಡು ಹೋಗೊಲ್ವೆ?"
"ಇಲ್ಲೇ ನನ್ನ ಖರ್ಚಿಗೇ ಬೇಕಾಗುತ್ತಲ್ಲ. ಇಟ್ಕೊಳ್ಳಿ."
ಆ ಮನೆಗೆ ಒಯ್ದರೆ ಜಯದೇವನಿಗೆ ಬೇಕಾದಾಗ ಹಣ ಸಿಗಲಾರದೆಂದು ತಿಳಿದಿದ್ದ
ಆಕೆ ಒತ್ತಾಯಿಸಲಿಲ್ಲ.
"ನಿನ್ನಿಷ್ಟ. ತೆಗೆದಿಡ್ತೀನಿ. ಬೇಕಾದಾಗ ಕೇಳು."
ವೇಣು ಸುನಂದೆಯರಿಗೆ ಜಯದೇವ ಹೇಳಿದ:
"ಒಂದು ವಾರ ಬಿಟ್ಕೊಂಡು ನೀವಿಬ್ಬರೂ ನಮ್ಮ ಹಳ್ಳಿಗೆ ಬನ್ನಿ"
ಹಿಂದೆ ಒಂದೆರಡು ಸಾರೆ ಆತ ಕರೆದಿದ್ದರೂ ಹೋಗುವುದಾಗಿರಲಿಲ್ಲ. ಈ ಸಲ
ವಾದರೂ ಹೋಗಲೇಬೇಕೆ೦ದು ಸುನಂದಾ ಆಸೆ ವ್ಯಕ್ತಪಡಿಸಿದಳು. ಪರೀಕ್ಷೆಗೆಂದು ಓದಿ
ಬೇಸರಗೊಂಡಿದ್ದ ವೇಣುಗೋಪಾಲ ಅಂತಹ ಪ್ರವಾಸಕ್ಕೆ ಸಿದ್ಧನಾಗಿಯೇ ಇದ್ದ.
"ಅಮ್ಮ, ಜಯಣ್ಣ ಊರಿಗೆ ಕರೀತಿದಾನೆ ನಮ್ಮನ್ನ," ಎಂದ ವೇಣು.
"ಹೋದರಾಯ್ತು, ಅದಕ್ಕೇನು?"ಎಂದರು ತಾಯಿ.
"ಬರುತ್ತಾ ನಾಲ್ಕು ಇದ್ದಿಲು ಮೂಟೆ ತರ್ತೀವಿ. ಕಾನಕಾನಹಳ್ಳಿ ಇದ್ದಿಲು
ಬಹಳ ಪ್ರಸಿದ್ದಿ!"