ಪುಟ:ನವೋದಯ.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

489

ಸಾಪ್ತಾಹಿಕ ಮತ್ತು ಚಲಚ್ಚಿತ್ರ ಪತ್ರಿಕೆಗಳು ದಿಂಬಿನ ಆಚೆಗೆ ಬಿದ್ದಿದ್ದುವು. ಸಿಗರೇಟಿನ
ತುಣುಕುಗಳು ಇಷ್ಟ ಬಂದ ಕಡೆ ನೆಲವನ್ನು ಅಪ್ಪಿದ್ದುವು.
ಜಯದೇವ ಬಂದಾಗ ರಾಮಾಚಾರಿ ಕ್ರಾಪು ಬಾಚಿಕೊಳ್ಳುತ್ತಿದ್ದ.
"ಬನ್ನಿ ಸಾರ್. ಅಪರೂಪವಾಗಿ ದರ್ಶನ ಕೊಟ್ಟಿರಲ್ಲಾ," ಎಂದ ಆತ.
ತೆರೆದೇ ಇದ್ದ ಹಾಸಿಗೆಯನ್ನು ತೋರಿಸಿ, "ಕೂತ್ಕೊಳ್ಳಿ" ಎ೦ದ.
ಜಯದೇವನನ್ನು ನೋಡಿದೊಡನೆ ಮುಖ ಸ್ವಲ್ಪ ವಿವರ್ಣವಾದರೂ ರಾಮಾ
ಚಾರಿ ತಡಮಾಡದೆ ಚೇತರಿಸಿಕೊಂಡ.
"ಊಟವಾಯ್ತೆ ರಾಮಾಚಾರಿ?"
"ಓಹೋ. ನಿಮ್ಮದು?"
"ಆಯ್ತು, ಜತೇಲೆ ಶಾಲೆಗೆ ಹೋಗೋಣಾಂತ ಇಲ್ಲಿಗ್ಬಂದೆ."
ಜಯದೇವ ನಿಂತೇ ಇದ್ದುದನ್ನು ಕಂಡು ರಾಮಾಚಾರಿಯೆಂದ:
"ಹೊರಡೋಣ ಹಾಗಾದರೆ."
ಆತ ಕೋಟು ತೊಟ್ಟುಕೊಂಡು ಹಾಸಿಗೆಯ ಬಳಿ ಇದ್ದ ಸಿಗರೇಟಿನ ಪ್ಯಾಕೆ
ಟನ್ನೂ ಬೆಂಕಿ ಪೊಟ್ಟಣವನ್ನೂ ಜೇಬಿಗೆ ತುರುಕಿದ. ಡವಡವನೆ ತೀವ್ರಗತಿಯಿಂದ
ಆತನ ಎದೆ ಹೊಡೆದುಕೊಳ್ಳುತ್ತಲೇ ಇತ್ತು. ಆದುದಾಗಲೆಂದು ರಾಮಾಚಾರಿ ಧೈರ್ಯ
ತಳೆದ.
ಹಾದಿಯಲ್ಲಿ ಇಬ್ಬರೂ ಮೌನವಾಗಿದ್ದರು. ಶಾಲೆ ಸಮೀಪಿಸಿದಂತೆ ಜಯದೇವ
ಹೇಳಿದ:
"ನಿಮ್ಮ ಹತ್ತಿರ ಸ್ವಲ್ಪ ಮಾತಾಡ್ಬೇಕು.
[ರಾಮಾಚಾರಿಗೆ ಈಗ ಯಾವ ಸಂದೇಹವೂ ಉಳಿಯಲಿಲ್ಲ.]
"ಉಪಾಧ್ಯಾಯರ ಕೊಠಡಿ ಇದೆಯಲ್ಲ, ಕೂತ್ಕೊಳ್ಳೋಣ."
"ಹೊರಗೆ ವಾಸಿ ಅನಿಸುತ್ತೆ. ಬನ್ನಿ ಆ ಮರದ ಕೆಳಗೆ ನೆರಳಿದೆ."
ಆ ನೆರಳಿನಲ್ಲಿ ಅವರು ನಿಂತರು.
ಜಯದೇವ ತಡಮಾಡಲಿಲ್ಲ.
"ನೀವು ಉಪಾಧ್ಯಾಯನಾಗಿ ವೃತ್ತಿಗೂ ಶಾಲೆಗೂ ಗೌರವ ತರಬೇಕೂಂತ
ಮಾಡಿದೀರೋ ಅಥವಾ__"
ಗೊಗ್ಗರ ಧ್ವನಿಯಲ್ಲಿ ರಾಮಾಚಾರಿ ಹೇಳಿದ:
"ಹಿತೋಪದೇಶಕ್ಕೆ ಕಿವಿಗೊಟ್ಟು ನನಗೆ ಅಭ್ಯಾಸವಿಲ್ಲ."
"ಹಾಗಾದರೆ ಇವತ್ನಿಂದಲೆ ಅದು ಶುರುವಾಗಲಿ."
"ನನ್ನ ಹತ್ತಿರ ಹೀಗೆ ಮಾತನಾಡೋಕೆ ನಿಮಗೆ ಏನು ಹಕ್ಕಿದೆ?"
"ನಾನು ನಿಮ್ಮ ಹಿತೈಷಿಯಾಗಿರೋದರಿಂದಲೇ ಆ ಹಕ್ಕು."

62