ಪುಟ:ನವೋದಯ.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

494

ಸೇತುವೆ

ಅದು ನಿಂತು ಹೋಗಿತ್ತು.
ಅಲ್ಲಿಯೇ ಇತ್ತೊಂದು ಗೋಡೆ ಗಡಿಯಾರ. [ಯಾರ ಮನೆಯನ್ನು ಅಲಂಕರಿ
ಸಿತ್ತೊ ಅದು ಹಿಂದೆ? ಈಗಂತೂ ಮಾರವಾಡಿಯ ಸ್ವತ್ತು.] ಆ ಸಮಯಕ್ಕೆ ಸರಿ
ಹೊಂದಿಸಲೆಂದು ತಿಮ್ಮಯ್ಯ ತಮ್ಮ ಗಡಿಯಾರವನ್ನು ಎಡಗೈಯಲ್ಲಿ ಹಿಡಿದರು.
ಆದರೆ ಕಿವಿ ತಿರುವಲೆಂದು ಹೊರಟವರು ಬಲಗೈಯನ್ನು ಹಿಂದಕ್ಕೆ ಸರಿಸಿ, "ಛೇ!"
ಎಂದರು.
"ಆಗಾಗ್ಗೆ ಬರ್ತಾ ಇರಿ ಮೇಸ್ಟ್ರೇ," ಎಂದು ಮಾರವಾಡಿ ಹೇಳುತ್ತಿದ್ದುದನ್ನು
ಕಿವಿಯ ಮೇಲೆ ಹಾಕಿಕೊಳ್ಳದೆಯೇ ಬೀದಿಗಿಳಿದರು ತಿಮ್ಮಯ್ಯ.

****

ಆ ವಾರದಲ್ಲೆ ಶ್ರೀಪತಿರಾಯರು ಅಳಿಯನೂರಿಗೆ ಬಂದರು. ಎರಡು ದಿನ
ಅಲ್ಲಿದ್ದು, ಮಗಳನ್ನೂ ಅಳಿಯನನ್ನೂ ಕರೆದುಕೊಂಡು ಬೆಂಗಳೂರಿಗೆ ಹೊರಟರು.
ನಿಲ್ದಾಣದಲ್ಲಿದ್ದ ತಿಮ್ಮಯ್ಯನವರು, ಕಂಡಕ್ಟರ್ 'ರೈಟ್' ಕೊಡುತ್ತಿದ್ದಂತೆ
ತಮ್ಮ ಕಿಸೆ ಗಡಿಯಾರವನ್ನು ಹೊರಗೆ ತೆಗೆದು ನೋಡಿ, "ಟೈಮಿಗೆ ಸರಿಯಾಗಿ ಬಿಟ್ಟಿ
ದಾನೆ," ಎಂದರು.



೧೮

ಕಾನಕಾನಹಳ್ಳಿಯಿಂದ ಗೋವಿಂದಪ್ಪನವರು ಜಯದೇವನಿಗೆ ಹೇಳಿ ಕಳುಹಿದರು_
ಹೆಂಡತಿಯೊಡನೆ ಒಮ್ಮೆ ಬಂದು ಹೋಗೆಂದು.
ಆದಷ್ಟು ಬೇಗನೆ ಹೋಗಿ ಬರುವುದೇ ವಾಸಿಯೆಂದು ಜಯದೇವ ಸುನಂದೆ
ಯೊಡನೆ ತನ್ನ ಹುಟ್ಟೂರಿಗೆ ಪಯಣ ಬೆಳೆಸಿದ. ಆ ಪ್ರಯಾಣದುದ್ದಕ್ಕೂ ಆತನ
ಗಿದ್ದುದು ಸುನಂದೆಗೆ ಅನನುಕೂಲವಾಗಬಾರದೆಂಬ ಕಾತರವೇ. ಹೆಚ್ಚು ದಿನ ಆ
ಊರಲ್ಲಿರುವ ಯೋಚನೆಯನ್ನೂ ಆತ ಮಾಡಿರಲಿಲ್ಲ.
ಆಗ ಮಾಧೂಗೆ ಕಾಲೇಜಿತ್ತು. ಸತ್ಯವತಿ ಪುನಃ ಗಂಡನ ಮನೆಗೆ ಹೋಗಿದ್ದಳು.
ಹೀಗೆ, ಎಳೆಯರಿಲ್ಲದೆ ಮನೆ ಭಣಗುಡುತ್ತಿತ್ತು. ಮನೆಯೊಡತಿ, ತನ್ನ ದುಗುಡಗಳನ್ನು
ನೀಗಲೆಂದು, ಕೆಲಸದವಳ ಮೇಲೆ ವೃಥಾ ಹರಿ ಹಾಯುತ್ತಿದ್ದಳು.
ತನ್ನ ಪಾದಗಳನ್ನು ಮುಟ್ಟಿ ನಮಿಸಿದ ಸುನಂದೆಗೆ ಆಕೆ ಅಂದರು:
"ನಾನು ನಿನ್ನ ಅತ್ತೆ ಅನ್ನೋದು ಗೊತ್ತಿದೆಯೇನಮ್ಮ?"
ಆ ಪ್ರಶ್ನೆಯೇ ಆಕೆ ಮಾಡಿದ ಆಶೀರ್ವಾದ.
ಗೋವಿಂದಪ್ಪನವರು ತಮ್ಮ ಹಿರಿಯ ಮಗನನ್ನು ಕಣ್ಣು ತುಂಬ ನೋಡಿದರು.