ಪುಟ:ನವೋದಯ.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

499

ಬರೋಕ್ಮುಂಚೆ ಪ್ರತಿ ತಿಂಗಳೂ ನಾನೇ ಸಂಬಳ ತರೋಕೆ ಹೋಗ್ತಾ ಇದ್ದೆ. ಯಾಕೆ
ಗೊತ್ತೆ?"
ಜಯದೇವ ನಸುನಕ್ಕ. ವೆಂಕಟರಾಯರು ನಂಜುಂಡಯ್ಯನನ್ನು'ಷೋಕಿ
ಮನುಷ್ಯ' ಎಂದು ಕರೆದಿದ್ದುದು ಆತನಿಗೆ ನೆನಪಾಯಿತು.
"ಊಹಿಸ್ಕೊಳ್ಳೋದು ಸಾಧ್ಯ," ಎಂದ ಆತ.
"ಇಲ್ಲೂ ಇರುವಷ್ಟು ದಿವಸ ದಿನಕ್ಕೊಂದರ ಹಾಗೆ ಸಿನಿಮಾ ನೋಡ್ತೀನಿ."
"ನೀವು ಥಿಯೇಟರಿಲ್ಲದ ಊರಿಂದ ಬಂದೋರು. ಹಾಗೆ ನೋಡೋದರಲ್ಲಿ
ಆಶ್ಚರ್ಯವಿಲ್ಲ. ಆದರೆ ಇಲ್ಲೆ ಹುಟ್ಟಿ ಬೆಳೆದೋರು ಹಲವರಿದಾರೆ_ದಿನಾ ಸಿನಿಮಾ
ನೋಡೋರು. ಅವರಿಗೇನು ಹೇಳ್ತೀರಾ?"
"ಅವರನ್ನ 'ವಸ್ತಾದಿಗಳೇ' ಅಂತ ಅಂದ್ಬಿಡೋದು!"
ಗಾಂಭೀರ್ಯದ ಮುಖವಾಡವಿಲ್ಲದೆ ನಂಜುಂಡಯ್ಯ ಹಾಗೆ ನಗೆಮಾತನ್ನಾಡಿ
ದುದು ಇಷ್ಟವೆನಿಸಿ, ಜಯದೇವನೂ ನಕ್ಕ.
...ಪ್ಲಾಜಾದಲ್ಲಿದ್ದ ಚಿತ್ರ ಚೆನ್ನಾಗಿತ್ತು.
......ಶಂಕರಪ್ಪ 'ಕುಮಾರ ಕೃಪಾ'ದಿಂದ ಹಿಂತಿರುಗಿ ನಂಜುಂಡಯ್ಯನಿಗೆ
ಹೇಳಿದರು:
"ಒಪ್ಪಿದರಪ್ಪಾ. ಮೊದಲೇನೋ ವಿದ್ಯಾ ಸಚಿವರನ್ನ ಕರಕೊಂಡ್ಹೋಗಿ ಅಂದರು.
ತಾವೇ ಆಗ್ಬೇಕೂಂತ ಹಟ ಹಿಡ್ದೆ. ಅದೇ ದಿವಸ ಸಾಯಂಕಾಲ ಬೆಂಗಳೂರಲ್ಲಿ ಬೇರೆ
ಕಾರ್ಯಕ್ರಮ ಇದೆಯಂತೆ. ಆದ್ದರಿಂದ ಹಿಂದಿನ ರಾತ್ರೆ ಬಂದು, ಬೆಳಗ್ಗಿನ ಹೊತ್ತೇ
ನಮ್ಮ ಕೆಲಸ ಮಾಡ್ಕೊಟ್ಟು, ನೇರವಾಗಿ ಬೆಂಗಳೂರ್‍ಗೆ ಬಂದ್ಬಿಡ್ತಾರಂತೆ."
ಆ ಸುದ್ದಿ ಕೇಳಿ ನಂಜುಂಡಯ್ಯನಿಗೆ ತುಂಬಾ ಸಂತೋಷವಾಯ್ತು.
"ಬನ್ನಿ. ಇವತ್ತೊಂದು ಸಿನಿಮಾಕ್ಕೆ ಹೋಗಿ ಖುಷಿಯಾಗಿರೋಣ," ಎಂದು
ಶಂಕರಪ್ಪನವರನ್ನು ಅವರು ಕರೆದರು.
ಆದರೆ ಶಂಕರಪ್ಪ ಒಪ್ಪಲಿಲ್ಲ.
"ಸಿನಿಮಾದಲ್ಲೇನಿದೆ ಮಣ್ಣು? ನೀವು ಹೋಗಿ ನೋಡಿ ತೃಪ್ತಿಪಟ್ಕೊಳ್ಳಿ,"
ಎಂದರು.
...ಜಯದೇವನ ಜೊತೆಗೂಡಿ ನಂಜುಂಡಯ್ಯ ಪತ್ರಿಕಾ ಸಂಪಾದಕರನ್ನೆಲ್ಲ ಭೇಟಿ
ಮಾಡಿಬಂದರು.
ಒಬ್ಬ ಸಂಪಾದಕರು ಕೇಳಿದರು:
"ಉದ್ಘಾಟನೆ ಮಾಡೋರು ಮುಖ್ಯ ಸಚಿವರು ತಾನೆ?"
"ಉದ್ಘಾಟನೆಯಲ್ಲ ಸಾರ್, ಶಂಕುಸ್ಥಾಪನೆ. ಮುಖ್ಯ ಸಚಿವರೇ ಮಾಡ್ತಾರೆ,"
ಎಂದು ನಂಜುಂಡಯ್ಯ ತಿದ್ದಿದರು; ಪ್ರಶ್ನೆಗೆ ಉತ್ತರವಿತ್ತರು.
"ಸರಿ ಸರಿ. ಶಂಕುಸ್ಥಾಪನೆ. ನೀವು ಯೋಚಿಸ್ಬೆಕಾದ್ದೇ ಇಲ್ಲ. ಪತ್ರಿಕೋ