ಪುಟ:ನವೋದಯ.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

511

ಭವಿಷ್ಯತ್ತಿನ ಆದರ್ಶ ಜೀವನದ ಕನಸು ಕಾಣುತ್ತಿದ್ದ ವಿದ್ಯಾರ್ಥಿ ದೆಸೆಯಿಂದ
ಹಿಡಿದು ಈ ವರೆಗೆ, ಎಷ್ಟೊಂದು ದೂರ ನಡೆದು ಬಂದಿದ್ದ ಜಯದೇವ! ಈಗಲೂ
ಭವಿಷ್ಯತ್ತಿನ ಬಗೆಗೆ ಕನಸುಗಳು ಆತನಲ್ಲಿ ಹೇರಳವಾಗಿದ್ದುವು. ಮಣ್ಣು ಒಣಗಿತೆಂದು,
ಹೆಚ್ಚು ಹಸಿಯಾಯಿತೆಂದು, ಒರಟಾಯಿತೆಂದು, ಅತಿ ನಯವಾಯಿತೆಂದು, ದಕ್ಷನಾದ
ಶಿಲ್ಪಿ ಮೂರ್ತಿಯ ಸೃಷ್ಟಿಯನ್ನು ಅರ್ಧದಲ್ಲೆ ಕೈ ಬಿಡುವುದುಂಟೆ? ಹಾಗೆಯೇ
ಜಯದೇವನೂ.
ಹಿಂದೆ ಆತ ವಿದ್ಯಾಸರಸ್ವತಿಯ ಮಂದಿರಕ್ಕೆ ಬಂದಿದ್ದ, ಅನನ್ಯ ಭಕ್ತಿಯಿಂದ.
ಆದರೆ ಬಾಗಿಲು ಎಂದು ಭಾವಿಸಿ ಒಳನುಗ್ಗಿದಲ್ಲಿ ಬಂಡೆಕಲ್ಲು ಮೆಲ್ಲನೆ ಮೂಗಿಗೆ
ಸೋಂಕಿತ್ತು.
ಮೆಲ್ಲನೆ ಸೋಂಕಿತ್ತು, ಅಷ್ಟೆ. ಮೂಗನ್ನೊಡೆದಿರಲ್ಲಿಲ್ಲ.
ಈಗ, ಪ್ರಗತಿಗೆ ಕಂಟಕವಾದ ಬಂಡೆಕಲ್ಲನ್ನು ಒಡೆಯಬೇಕು ಎಂಬುದನು ಆತ
ತಿಳಿದಿದ್ದ.
ಆದರೆ ಸಾಧ್ಯವಾಗುತ್ತಿರಲಿಲ್ಲ: ಬಾರಿ ಬಾರಿಗೂ ಬಳಸಿ ಹೋಗಬೇಕಾಗುತ್ತಿತ್ತು.
ಹಾಗೆಂದು ಕೊನೆಯವರೆಗೂ ಪರಿಸ್ಥಿತಿ ಇರುವುದುಂಟೆ?
ಪ್ರಪಂಚದಲ್ಲಿ ಒಳ್ಳೆಯ ಜನರೂ ಇದ್ದರು; ಕೆಟ್ಟ ಜನರೂ ಇದ್ದರು. ಒಳ್ಳೆಯ
ಜನ ಒಂದಾಗಿ ಅವರ ಬಲ ಹೆಚ್ಚಿದಷ್ಟೂ ಕೆಟ್ಟ ಜನರ ಶಕ್ತಿ ಕುಂದುವುದು; ಅವರು
ಬದಲಾಗುವರು, ಇಲ್ಲವೆ ಮಣ್ಣಾಗುವರು...
ಹೊಸ ನಾಡಿನ ಉದಯ. ಒಬ್ಬ ವ್ಯಕ್ತಿಯದಲ್ಲ, ಸಹಸ್ರ ಸಹಸ್ರ ಜನರ ಕನಸು
ಗಳು ಏಕೀಭವಿಸಿ ಕಾರ್ಯವಾಗುತ್ತಿರುವ ಅಪೂರ್ವ ಸನ್ನಿವೇಶ.
ಅದು ಒಳ್ಳಿತಿಗೋಸ್ಕರವೆ ಆಗುವ ಬದಲಾವಣೆ. ಅದರಿಂದ ಕೆಡುಕಾಗಬಾರದು;
ಕೆಡುಕಾಗಲಾರದು. ಸುಪ್ತ ಶಕ್ತಿಗಳು ಎಚ್ಚರಗೊಂಡಾಗ, ಜಾಗೃತ ಜನಸ್ತೋಮದ
ಧಮನಿಯಲ್ಲಿ ಸ್ವಾಭಿಮಾನದ ಶೌರ್‍ಯದ ರಾಷ್ಟ್ರಪ್ರೇಮದ ಪವಿತ್ರ ರಕ್ತ ಸಂಚಾರ
ವಾದಾಗ, ಜನತೆಗೆ ಒಳಿತಾಗದೆಂದು ಹೇಳುವವರು ಯಾರು?
ಬದುಕನ್ನು ಹಸನುಗೊಳಿಸಲು, ಸಮಾಜವನ್ನು ಈಗಿನ ಸ್ಥಿತಿಯಿಂದ ಊರ್ಜಿತ
ಸ್ಥಿತಿಗೆ ಒಯ್ಯಲು, ವಿದ್ಯೆಯೇ ಅತ್ಯಂತ ಮುಖ್ಯ ಸಾಧನವೆ೦ದು ಜಯದೇವ ತಿಳಿದಿದ್ದ.
ಪ್ರಜ್ಞೆ_ಬೋಧೆ.
ವಿದ್ಯೆ_ಸಂಸ್ಕಾರ.
ಆತನಿಗೆ ಗೊತ್ತಿತ್ತು, ಅದು ಮಹಾಯಜ್ಞ ವೆಂಬುದು.
ಯಜ್ಞಪಶುವಾಗಿಯಲ್ಲ, ವಟುವಾಗಿ ಆತ ಅಲ್ಲಿಗೆ ಬಂದ್ದಿದ್ದ.
ಆ ಕಡು ಬೇಗೆಯ ಬಳಿಕ ಮಳೆ ಹನಿಯಲೇಬೇಕು. ಗಿಡಗುಂಟೆಗಳು ಚಿಗು
ರೊಡೆಯಲೇಬೇಕು. ನೆಲ ಹಸುರಾಗಲೇಬೇಕು.