ಪುಟ:ನವೋದಯ.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

514

ಸೇತುವೆ

ದ್ವಿತೀಯ ಮುದ್ರಣದ ಮುನ್ನುಡಿ

ಎರಡು ದಶಕ ದಾಟಿದ ಮೇಲೆ

ಓದುಗರು ಕಳೆದ ಕೆಲ ವರ್ಷಗಳಲ್ಲಿ ಆಗಾಗ್ಗೆ 'ರಂಗಮ್ಮನ ವಠಾರ'ದ ಮಾತೆ
ತ್ತಿದ್ದಾರೆ. ವಿಮರ್ಶಕರೂ ಅದರ ಪ್ರಸ್ತಾಪ ಮಾಡಿದ್ದಾರೆ. ಓದದೆ ಇರುವವರು
"ಪುಸ್ತಕ ಎಲ್ಲಿ ಸಿಗುತ್ತದೆ?" ಎಂದು ಕೇಳುತ್ತ ಬಂದಿದ್ದಾರೆ.
ಅದನ್ನು ಗಮನಿಸಿ, 'ರಂಗಮ್ಮನ ವಠಾರ'ದ ಹೊಸ ಆವೃತ್ತಿಯನ್ನು ಕಥಾ
ಸಾಹಿತ್ಯ ಹೊರತರುತ್ತಿದೆ.
ವಠಾರ, ಕೊಠಡಿ, ಹೊರಮನೆ, ಜೋಡಿಮನೆ_ಚಿಕ್ಕಂದಿನಿಂದಲೂ ನನಗೆ
ಪರಿಚಿತ. ನೀಲೇಶ್ವರ, ಮಂಗಳೂರು, ಬೆಂಗಳೂರು [ಮಲ್ಲೇಶ್ವರ, ಚಾಮರಾಜಪೇಟೆ,
ಬಸವನಗುಡಿ, ವಿಲ್ಸನ್ ಗಾರ್ಡನ್], ಹುಬ್ಬಳಿ, ಧಾರವಾಡ.... ಇಲ್ಲೆಲ್ಲ, ವಠಾರದಲ್ಲೋ
ಕೊಠಡಿಯಲ್ಲೋ ಹೊರಮನೆಯಲ್ಲೋ ಜೋಡಿ ಮನೆಯಲ್ಲೋ ನಾನು
ನೆಲೆಸಿದವನು. ಮಿತ್ರರು ವಾಸಿಸುತ್ತಿದ್ದ ಇಂಥ ಹಲವು ವಸತಿಗಳೂ ನನಗೆ ಪರಿಚಿತ.
ಜೀವನದ ಇರುವಿಕೆಗೆ ಸಂಬಂಧಿಸಿದ ಸಾಮಗ್ರಿ ಹೀಗೆ ನನಗೆ ಒದಗಿ ಬಂದಿದೆ. ಕಾಲ್ಪನಿಕ
'ರಂಗಮ್ಮನ ವಠಾರ' ವಾಸ್ತವಿಕವೆಂದು ಕಾಣುವುದು ಈ ಕಾರಣದಿಂದ.
ಒಂದು ವಠಾರದಲ್ಲಿ ರಂಗಮ್ಮ ಎಂಬ ವ್ಯಕ್ತಿಯೂ ಒಬ್ಬರಿದ್ದರು. ನಾನು
ಗೌರವಿಸಿದ ಜೀವ. ಕಾದಂಬರಿ ನನ್ನ ವಠಾರಕ್ಕೆ ಅವರ ಹೆಸರನ್ನಿಟ್ಟಿರುವುದು
ಸಾಂಕೇತಿಕವಾಗಿ. ಇಲ್ಲಿನ ರಂಗಮ್ಮ ಮಾತ್ರ ನನ್ನ ಕಲ್ಪನೆಯ ಸೃಷ್ಟಿ, _ ಇತರ ಎಲ್ಲ
ಪಾತ್ರಗಳ ಹಾಗೆ.
ಎರಡು ದಶಕ ದಾಟಿದ ಮೇಲಾದರೂ ಈ ಬಗೆಗೆ ವಿವರಣೆ ನೀಡಲು ಅವಕಾಶ
ದೊರೆತಿದೆಯೆಂದು ನನಗೆ ಸಮಾಧಾನವೆನಿಸಿದೆ.



28 ಫೆಬ್ರವರಿ 1976

ಜಯನಗರ-ದಕ್ಷಿಣ

ನಿರಂಜನ

ಬೆಂಗಳೂರು 560 041

ತಮ್ಮ ಕೈ ಹೊತ್ತಗೆ (ಪುಸ್ತಕದ ಬೆಲೆ ಒಂದೂವರೆರೂಪಾಯಿ) ಸರಣಿಯಲ್ಲಿ
'ರಂಗಮ್ಮನ ವಠಾರ'ವನ್ನು ಮೊದಲ ಬಾರಿ ಬೆಳಕಿಗೆ ತಂದ ಶ್ರೀ ಎಂ. ಎಸ್.
ಚಿಂತಾಮಣಿ ಅವರ ನೆನಪು ನನ್ನ ಪಾಲಿಗೆ ಸದಾ ಹಸುರು. ಅವರಿಗೆ ಋಣಿ.