ಪುಟ:ನವೋದಯ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

338

ಸೇತುವೆ

ಇರಲಿ.”
“ನೋಡಿದಿರಾ? ಹ್ಯಾಗೆ ತಲೆಗೇ ಹೊಡೆದ ಹಾಗೆ ಹೊಡೆದ ಹಾಗೆ ಮಾತಾಡ್ತಾನೆ!" ಎಂದು
ಆತನ ಚಿಕ್ಕಮ್ಮ ಅಳಲು ಸಿದ್ಧವಾದರು.
ಆ ದೃಶ್ಯವನ್ನು ನೋಡಲು ಜಯದೇವ ಅಲ್ಲಿ ನಿಲ್ಲಲಿಲ್ಲ.
ನೂರು ರೂಪಾಯಿ ಉಳಿಸಿದ್ದ ವಿಷಯ ಆತ ಆವರೆಗೂ ಹೇಳಿರಲಿಲ್ಲ. 'ಎಷ್ಟು
ಹಣ ಬೇಕಪ್ಪಾ?” ಎಂದು ತಂದೆಯೇನಾದರೂ ಕೇಳಿದರೆ, ಅದರ ಪ್ರಸ್ತಾಪ ಮಾಡಿದ
ರಾಯಿತೆಂದುಕೊಂಡಿದ್ದ. ಈಗಂತೂ ಅಂತಹ ಪ್ರಸ್ತಾಪದ ಅಗತ್ಯ ತೋರಲಿಲ್ಲ.
ವೇಣು ಸುನಂದೆಯರು ಬರುವುದು ಚಿಕ್ಕಮ್ಮನಿಗೆ ಇಷ್ಟವಾಗುತ್ತದೋ
ಇಲ್ಲವೋ ಎಂಬ ಶಂಕೆ ಜಯದೇವನನ್ನು ಬಾಧಿಸುತ್ತಲೇ ಇತ್ತು. ಅವರು ಬರುವುದನ್ನು
ಕಾಯದೆ ತಾನೇ ಬೆಂಗಳೂರಿಗೆ ಹೊರಟುಬಿಟ್ಟರಾಯಿತು ಎಂದೂ ಯೋಚಿಸಿದ. ಇಲ್ಲಿ,
ಎದ್ದರೂ ಬೇಸರ ಕುಳಿತರೂ ಬೇಸರ ಎನ್ನುವಂತಾಗಿತ್ತು.
ಆ ಸ್ಥಿತಿಗತಿಗಳ ಸೂಕ್ಷ್ಮಪರಿಚಯಮಾಡಿಕೊಟ್ಟು, ವೇಣುಗೆ ಕಾಗದ ಬರೆಯ
ಬೇಕೆಂದು ಜಯದೇವ ಎಣಿಸುತ್ತಿದ್ದಾಗಲೇ ಒಂದು ದಿನ ವೇಣುಗೋಪಾಲನ ಆಗಮನ
ವಾಯಿತು. ಬಂದಿದ್ದುದು ಆತನೊಬ್ಬನೇ.
“ಸುನಂದಾ ಬರೋದಿಲ್ಲ ಅಂದಳೇನೊ?" ಎಂದು ಜಯದೇವ ಕೇಳಿದ.
"ಹೊರಟಿದ್ಲು. ಆದರೆ ಕೊನೆ ಘಳಿಗೇಲಿ ಅಪ್ಪ ಅಮ್ಮ ಅದೇನೇನೊ ಮಂತ್ರಾ
ಲೋಚನೆ ನಡೆಸಿ, ನೀನೊಬ್ನೇ ಹೋಗು-ಅಂದ್ರು."
ಆ ಮಾತಿನಿಂದೇನೂ ಸಮಾಧಾನವಾಗುವಂತಿರಲಿಲ್ಲ ಜಯದೇವನಿಗೆ.
“ನೀನು ಬರೋ ವಿಷಯ ತಿಳಿಸಿ ಕಾಗದ ಬರೆಯೋಕೆ ಏನಾಗಿತ್ತು? ಬಸ್
ಸ್ಟ್ಯಾಂಡಿಗಾದರೂ ಬರ್ತಿದ್ನೆಲ್ಲ."
"ಈ ಊರಲ್ಲಿ ನಿನ್ನ ಮನೆ ಹುಡುಕೋದು ಮಹಾ ಕೆಲಸ ಅಂತ್ಲೋ. ಶಾನು
ಭೋಗರು ಅಂದ್ಮೇಲೆ-"
ತಂದೆಯೊಡನೆ ನಡೆಸಿದ್ದ ಮಾತುಕತೆಯ ನೆನಪಾಗಿ ಜಯದೇವ ಸಣ್ಣನೆ ನಕ್ಕ.
"ಯಾಕ್ನಗ್ತೀಯಾ?" ಎಂದು ಕೇಳಿದ ವೇಣುಗೋಪಾಲ.
"ಯಾಕೂ ಇಲ್ಲ. ಅಂತೂ ಬಂದೆಯಲ್ಲ," ಎಂದು ಜಯದೇವ ಮಾತು
ಬದಲಿಸಿದ.
ವೇಣುಗೋಪಾಲ ಬಂದುದರಿಂದ ಬೇಸರ ಕಳೆಯಲು ಜಯದೇವನಿಗೆ ಅನು
ಕೂಲವಾಯಿತು. ವೇಣು, ಮಾಧವನೊಡನೆ ಸುಲಭವಾಗಿ ಹೊಂದಿಕೊ೦ಡ. ಸತ್ಯ
ವತಿಯಂತೂ ನಿತ್ಯಕ್ಕಿಂತ ಹೆಚ್ಚಿನ ಬೆಡಗುಬಿನ್ನಾಣದಿಂದ ಬೆಂಗಳೂರಿನ ನವಯುವಕ
ನೆದುರು ಶೋಭಿಸಿದಳು. ಜಯದೇವನಿಗೆ ಅಚ್ಚರಿಯನ್ನುಂಟು ಮಾಡಿದವರೆಂದರೆ
ಆತನ ಚಿಕ್ಕಮ್ಮ. ಆಕೆ ಮಲಮಗನ ಸ್ನೇಹಿತನೆಂದು ವೇಣುಗೋಪಾಲನನ್ನು ಅನಾ
ದರದಿಂದ ಕಾಣಲಿಲ್ಲ. ಬದಲು, ಬಗೆ ಬಗೆಯ ತಿಂಡಿ ಮಾಡಿ ಸತ್ಕರಿಸಿದರು. ಆತ