ಪುಟ:ನವೋದಯ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

339

ಭಾವೀ ಅಳಿಯನಾಗಬಹುದೆಂಬ ವಿಚಾರ ಅವರಲ್ಲಿ ಮೂಡಿತ್ತು ಎಂದಲ್ಲ. ಅಠಾರಾ
ಕಚೇರಿಯ ಅಂತಸ್ತಿನೊಡನೆಯೇ ತಮ್ಮ ಬೀಗತನ ಎಂಬುದನ್ನು ಒಪ್ಪಲು ಸಿದ್ಧರಿರ
ಲಿಲ್ಲ ಆಕೆ. ಆದರೂ, ಮಗಳು ಸಿಂಗಾರ ಮಾಡಿಕೊಳ್ಳುತ್ತಿದ್ದುದನ್ನು ಕಂಡಾಗಲೆಲ್ಲ,
ಬಂದವನ ವಿಷಯದಲ್ಲಿ ಅವರ ಪ್ರೀತಿ ಹೆಚ್ಚುತ್ತಿತ್ತು.
ಜಯದೇವ ಗೆಳೆಯನಿಗೆ೦ದ:
"ನನಗಿಲ್ಲದ ಗೌರವ ನಿನಗೆ! ನೀನು ಬಂದೇಂತ ಒ೦ದಿಷ್ಟು ತಿಂಡಿ ರುಚಿಯಾದರೂ
ನಾನು ನೋಡೋ ಹಾಗಾಯ್ತು."
ನಿಜ ಸಂಗತಿಯ ಅರಿವು ಇಲ್ಲದ ಯಾರೂ ಆ ಮಾತನ್ನು ನಂಬುವುದು ಸಾಧ್ಯ
ವಿರಲಿಲ್ಲ. ಕಾನಕಾನಹಳ್ಳಿಯ ತನ್ನ ಮನೆಯ ವಿಷಯ ಹೆಚ್ಚಾಗಿ ಏನನ್ನೂ ಜಯದೇವ
ಹೇಳಿದವನಲ್ಲವಾದರೂ ಸೂಕ್ಷ್ಮವಾದ ನಿರೀಕ್ಷಣೆಯಿ೦ದ ಸಾಕಷ್ಟು ಸತ್ಯಾ೦ಶವನ್ನು
ತಿಳಿಯುವ ಸಾಮರ್ಥ್ಯ ವೇಣುಗೋಪಾಲನಿಗಿತ್ತು.
ಗೆಳೆಯನತ್ತ ನೋಡಿ ಆತನೆಂದ:
"ವಿಚಿತ್ರ ಹೆಂಗಸು ಕಣೋ ನಿನ್ನ ಚಿಕ್ಕಮ್ಮ."
ವೇಣು ಜಯದೇವನ ಮನೆಯಲ್ಲಿ ಉಳಿದುದು ನಾಲ್ಕೇ ದಿನ. ಹೊರಡುತ್ತ ಆತ
ಸ್ನೇಹಿತನನ್ನು ಬೆ೦ಗಳೂರಿಗೆ ಕರೆದ.
"ಬೇಕಾದರೆ ನಿನ್ನ ಅಪ್ಪಯ್ಯನಿಗೆ ಹೇಳ್ತೀನಿ. ಈಗ್ಲೇ ಹೊರಟ್ಬಿಡೋಣ."
ಜಯದೇವ ಒಪ್ಫಲಿಲ್ಲ.
“ನೀನು ಹೋಗು. ಒಂದು ವಾರ ಬಿಟ್ಕೊಂಡು ಬಂದ್ಬಿಡ್ತೀನಿ."
...ಆ ಮಾತಿನಂತೆ ಒಂದು ವಾರದ ಬಳಿಕ ಬೆಂಗಳೂರಿಗೆ ಹೋದ ಜಯದೇವ.
ಮುಂದಿನದು ಕಾಲೇಜು ಸೇರುವ ಸಿದ್ಧತೆ. ಶಿಕ್ಷಣದ ವರ್ಷಾರಂಭಕ್ಕೆ ಒಂದೂವರೆ
ತಿಂಗಳ ಅವಧಿ ಇತ್ತಾದರೂ ಜಯದೇವನ ತಯಾರಿಗೆ ಅದು ಅಲ್ಪವೇ.
ವೇಣು, ಜಯದೇವ, ಇಬ್ಬರೂ ರಜಾಕಾಲದಲ್ಲಿ ಎಲ್ಲಾದರೂ ಕೆಲಸಕ್ಕೆ ಸೇರ
ಬೇಕೆಂದು ಶ್ರೀಪತಿರಾಯರು ಸಲಹೆ ಮಾಡಿದರು.
"ಬಂದಷ್ಟು ಬರಲಿ. ಅದರಲ್ಲಿ ಅವಮಾನವೇನೂ ಇಲ್ಲ," ಎಂದರು.
ಅವಮಾನದ ಮಾತೆಲ್ಲಿಯದು? ಕೆಲಸವಿರಲಿಲ್ಲ ಅಷ್ಟೆ. ಸ್ವತಃ ಶ್ರೀಪತಿರಾಯರೇ
ಓಡಾಡಿ ಹುಡುಕಿದರು. ಒಂದು ಅಂಗಡಿಯಲ್ಲಿ ಲೆಕ್ಕ ಬರೆಯುವ ತಾತ್ಕಾಲಿಕ ಕೆಲಸ
ಒಬ್ಬರ ಮಟ್ಟಿಗೆ ದೊರೆಯಿತು. ಜಯದೇವನನ್ನೆ ಶ್ರೀಪತಿರಾಯರು ಅಲ್ಲಿಗೆ ಕರೆ
ದೊಯ್ದರು.
ನಡುವೆ ಓದು ನಿಲ್ಲಿಸಿ ಜಯದೇವ ಉಪಾಧ್ಯಾಯನಾದುದರಿಂದ, ಸಹಪಾಠಿ
ವೇಣು ಒಂದು ವರ್ಷ ಮುಂದಕ್ಕೆ ಹೋಗಿದ್ದ.ಆದರೆ ಪುನಃ ಜತೆ ದೊರೆಯಿತೆಂದು
ಅವನಿಗೆ ಸಂತೋಷವಾಯಿತು. ಜಯದೇವ ಈಗ ಎಲ್ಲ ಪುಸ್ತಕಗಳನ್ನೂ ಕೊಳ್ಳ
ಬೇಕಾದುದಿರಲಿಲ್ಲ. ವೇಣುವಿನ ಕೆಲ ಟಿಪ್ಪಣಿಗಳೂ ಆತನ ನೆರವಿಗಿದ್ದುವು.