ಪುಟ:ನವೋದಯ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

341

"ಚೆನ್ನಾಗಿರುತ್ತೆ .”
"ಚೆನ್ನಾಗಿರುತ್ತೋ ಇಲ್ಲವೋ. ಹುಡುಗಿ ಇಂಟರೂಂತಂದ್ರೆ ಮದುವೆ ಮಾರ್ಕೆಟಿ
ನಲ್ಲಿ ಒಂದಿಷ್ಟು ಬೆಲೆ ಬರುತ್ತೆ-ಅದಕ್ಕೋಸ್ಕರ!"
ವಿಷಾದಕ್ಕಿಂತಲೂ ಹಾಸ್ಯದ ಛಾಯೆಯೇ ಆ ಧ್ವನಿಯಲ್ಲಿ ಕಂಡು ಬಂತು. ಬೇಸರ
ಪಡುವ ಅಗತ್ಯವಿರಲಿಲ್ಲ.
"ಹಾಗೇನಿಲ್ಲ. ಓದೋದು ಅಂದ್ರೆ ಸುನಂದೆಗೂ ಇಷ್ಟವೇ."
ಸುನಂದೆಯ ಪರ ವಾದಿಸಿದ ಜಯದೇವ. ಸುತ್ತಲಂತೂ ಆಕೆಯ ಸುಳಿವು
ಇರಲಿಲ್ಲ.
ಮೊದಲ ಒಂದೆರಡು ತಿಂಗಳು ಬಿಡುವಿತ್ತು. ಬಳಿಕ ಬೆಳಗ್ಗೆಯೂ ಹುಡುಗರಿಗೆ
ಪಾಠ, ಸಂಜೆಯೂ ಪಾಠ. ಆತ ಉಪಾಧ್ಯಾಯನಾಗಿದ್ದುದನ್ನು ತಿಳಿದ ಗೆಳೆಯರಂತೂ
"ಮೇಸ್ಟ್ರು" ಎಂದೇ ಜಯದೇವನನ್ನು ಸಂಬೋಧಿಸಿದರು. ತರಗತಿಯಲ್ಲಿ ಚುರುಕಾ
ಗಿದ್ದುದರಿಂದ ಪ್ರಾಧ್ಯಾಪಕರ ಮೆಚ್ಚುಗೆ ದೊರೆಯಿತು. ಆತನ ಸಾಹಸೀ ಜೀವನದ
ಪರಿಚಯ ಅವರಿಗೆ ಆದಾಗಲಂತೂ ಮೆಚ್ಚುಗೆಯೊಡನೆ ಗೌರವವೂ ಬೆರೆಯಿತು.
ನಡುವೆ ವೇಣು ಒಂದು ಭಾನುವಾರ, ಮಾಧುವನ್ನು ಮನೆಗೆ ಕರೆದು ತಂದ.
ಆತ ಸುಂದರ ಉಡುಗೆಯ 'ಶಿಸ್ತುಗಾರ.' ಸಂಕೋಚ ಪ್ರವೃತ್ತಿ ಇತ್ತಾದರೂ ಸರಳತೆ
ಇರಲಿಲ್ಲ.
..."ನಿನ್ನ ತರಗತೀನೆ ಕಣೇ," ಎಂದು ಸುನಂದೆಗೆ ವೇಣು ಆತನ ಪರಿಚಯ
ಮಾಡಿಕೊಟ್ಟ. ಮಾಧುವಿನೆದುರು, ಹಿಂದಿನ ವರ್ಷ ಆತ ಅನುತ್ತೀರ್ಣನಾಗಿದ್ದ
ವಿಷಯ ಪ್ರಸ್ತಾಪಿಸಲಿಲ್ಲ.
....ಜನವರಿಯಲ್ಲೊಮ್ಮೆ ಜಯದೇವನ ತಂದೆ, ಬಹಳ ಕಾಲದಿಂದ ಬರದೇ
ಇದ್ದ ಮಗನನ್ನು ಹುಡುಕಿಕೊಂಡು ಬಂದರು. ನೆಪಕ್ಕೆಂದು ಕಂದಾಯ ಖಾತೆಯ
ಕೆಲಸವೂ ಒಂದಿತ್ತು.
ಸಂಜೆ ಕಳೆದು ಚೆನ್ನಾಗಿ ಕತ್ತ ಲಾಗಿದ್ದುದರಿಂದ ಜಯದೇವ ಮನೆಯಲ್ಲೇ ಇದ್ದ.
ಶ್ರೀಪತಿರಾಯರು ಗೋವಿಂದಪ್ಪನವರನ್ನು ಆದರದಿಂದಲೇ ಬರಮಾಡಿ
ಕೊಂಡರು. ಕಾನಕಾನಹಳ್ಳಿ ದೂರವಿದ್ದುದರಿಂದ ಗೋವಿಂದಪ್ಪನವರ ನಡೆನುಡಿ
ಯಲ್ಲೀಗ ಧಾರಾಳತನವಿತ್ತು. ಆದರೆ, ಜಯದೇವನ ಪ್ರಸ್ತಾಪ ಬಂದಾಗಲೆಲ್ಲ ತಪ್ಪಿ
ತಸ್ಥನ ಧ್ವನಿಯೂ ಮಾತಿನಲ್ಲಿರುತ್ತಿತ್ತು.
ಶ್ರೀಪತಿರಾಯರು ಒತ್ತಾಯಿಸಿದರೆಂದು ಜಯದೇವನ ತಂದೆ ಆ ರಾತ್ರೆ
ಅಲ್ಲಿಯೇ ಊಟ ಮಾಡಿದರು. ಅವರಿಗೆಲ್ಲ ಬಡಿಸಿದ ಸುನಂದೆಯ ಪರಿಚಯವನ್ನು
ಹೊಸಬರಿಗೆ ಮಾಡಿಕೊಡಲು ಶ್ರೀಪತಿರಾಯರು ಮರೆಯಲಿಲ್ಲ.
ತಾವು ಉಳಿದುಕೊಂಡಿದ್ದ ಸ್ನೇಹಿತರ ಮನೆಗೆ ಗೋವಿಂದಪ್ಪನವರು ಹೊರ
ಟಂತೆ ಜಯದೇವ ಕೇಳಿದ: