ಪುಟ:ನವೋದಯ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

348

ಸೇತುವೆ

ಶ್ರೀಪತಿರಾಯರು ನಕ್ಕರು:
"ಇದೊಳ್ಳೇ ನಾಚ್ಕೆ. ಅಥವಾ, ಕೋಪಿಸ್ಕೊಂಡಿದೀಯೊ ಎಲ್ಲಾದರೂ? ಎಲ್ಲಿ,
ಮುಖ ನೋಡೋಣ."
ಜಯದೇವ ತಲೆ ಎತ್ತಿದ.
"ಇಲ್ಲ ಸಾರ್."
"ಹಾಗಾದರೆ ಇನ್ನು ಸಾರ್ ಅನ್ಬೇಡ-ಮಾವ ಅನ್ನು."
ಜಯದೇವ ಮುಗುಳು ನಕ್ಕ, ಹೀಗಿದ್ದರೂ ಹೇಳಬೇಕಾದುದು ತನ್ನ ಕರ್ತವ್ಯ
ಎಂಬಂತೆ ಅವರು ಮತ್ತೂ ಅಂದರು:
"ಇಲ್ಲಿ ದಾಕ್ಷಿಣ್ಯದ ಪ್ರಶ್ನೆ ಇಲ್ಲ ಜಯಣ್ಣ. ನೀನು ಒಪ್ಪಿದರೆ ಅಳಿಯಾಂತ
ಕರೀತೀನಿ. ಇಲ್ಲದೇ ಹೋದರೆ ಮಗ ಅಂತ ಭಾವಿಸ್ತೀನಿ."
ತಾನು ಮಾತನಾಡದೆ ಇರಬಾರದೆಂದು ಜಯದೇವ ನುಡಿದ:
"ಯಾವುದು ಹ್ಯಾಗೇಂತ ನಿಮಗೆ ತಿಳೀದಾ?"
"ಬುದ್ಧಿವಂತಿಕೆಯ ಉತ್ತರ ಕಣೋ. ಹೋಗಲಿ. ನಾಳೆ ಒಳ್ಳೇ ದಿನ. ನಿಮ್ಮೂ
ರಿಗೆ ಹೋಗೋಣ್ವೊ? ಕನ್ಯಾಸೆರೆ ಬಿಡಿಸ್ಕೊಳ್ಳೀಂತ ಪ್ರಾರ್ಥಿಸೋದು ಹೆಣ್ಣು ಹೆತ್ತವರ
ಧರ್ಮ."
"ಪ್ರಾರ್ಥನೆ ಅಂತಲ್ಲ. ನಮ್ಮ ತಂದೇನ ನೀವು ನೋಡೋದರಿಂದ_"
"ಅದಕ್ಕೇ ಕಣಯ್ಯ ಹೋಗೋದು. ಸುನಂದೆಯನ್ನೂ ಕರಕೊಂಡು
ಹೋಗೋಣವೋ?"
"ಬೇಡಿ. ಅವರೆಲ್ಲ ಹೋದ ವರ್ಷವೇ ಆಕೇನ ನೋಡಿದಾರಲ್ಲ."
"ಸರಿ. ಸರಿ."
...ವಿಷಯ ತಿಳಿದಾಗ ಅಡಕತ್ತರಿಯೊಳಗೆ ಸಿಲುಕಿಸಿ ಹಾಗಾಯಿತು ಜಯದೇವನ
ತಂದೆಯ ಪರಿಸ್ಥಿತಿ. ಅವರಾಕೆ ಹೊರಗಿನವರಿಗೂ ಕೇಳಿಸುವಂತೆ ಒಳಗಿನಿಂದಲೇ
ಚೀರಾಡಿದರು. "ಆವತ್ತು ನೋಡಿದರೇನಾಯ್ತು? ತೋರಿಸೋಕೇಂತ ಹುಡುಗೀನ
ಕರಕೊಂಡು ಬರೋದು ಬೇಡ್ವೇನು?" ಎಂದು ಟೀಕಿಸಿದರು. ಆ ಸಂಬಂಧವೇ ತನಗೆ
ಒಪ್ಪಿಗೆ ಇಲ್ಲ ಎಂದರು. ಮಗಳ ಮದುವೆಗೆ ಆದ ವೆಚ್ಚ, ಸೊಸೆ ಬಂದಾಗಲಾದರೂ
ಮರಳಿ ದೊರೆಯಬೇಕೆಂಬುದು ಆಕೆಯ ಅಪೇಕ್ಷೆ.
"ಅದೆಲ್ಲ ದೊಡ್ಡ ವಿಷಯವಲ್ಲ; ಕಾಲಸ್ಥಿತಿಗೆ ಹೊಂದಿಕೊಂಡು ಅದರ ಏರ್ಪಾಟು
ಮಾಡೋಣ," ಎಂದರು, ಹೊಲ ಮಾರಿ ಬಂದಿದ್ದ ಶ್ರೀಪತಿರಾಯರು.
ಗೋವಿಂದಪ್ಪದವರಿಗೇನೋ ಆ ಜೋಡಿ ಒಪ್ಪಿಗೆಯಾಗಿತ್ತು. ಆದರೆ ಸ್ಪಷ್ಟ
ವಾಗಿ ಹಾಗೆ ಹೇಳುವ ಧೈರ್ಯವಿರಲಿಲ್ಲ.
"ಕಾಗದ ಬರೀತೀನಿ," ಎಂದರು.
ಶ್ರೀಪತಿರಾಯರೆಂದರು: