ಪುಟ:ನವೋದಯ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

351

ಗಂಡಸು. ಜಯದೇವನ ಗುರುತು ಹಿಡಿದವರೂ ಒಬ್ಬಿಬ್ಬರಿದ್ದರು. ಅ೦ಥವರು
ಎರಡನೆಯ ಬಾರಿ, ಭಾಗ್ಯವಂತೆ ಸುನಂದೆಯನ್ನು ಕುತೂಹಲದಿಂದ ನೋಡಿದರು.
ಮತ್ತೂ ಒಂದಷ್ಟು ದೂರ ಮೌನವಾಗಿ ನಡೆದ ಬಳಿಕ ಸುನಂದಾ ಪುನಃ
ಕೇಳಿದಳು:
"ಎಲ್ರೀ ಇದೆ ಆ ಮನೆ?"
"ಇನ್ನೂ ಒಂದು ಮೈಲಾಗುತ್ತೆ," ಎಂದ ಜಯದೇವ.
"ಹೂಂ. ನನ್ಕೈಲಾಗಲ್ಲ ನಡೆಯೋಕೆ."
“ಹಾಗಾದರೆ ಈ ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ತಗೊಳ್ಳೋಣ, ಬಾ."
ನಡೆಯುತ್ತಿದ್ದ ಜಯದೇವ ಒಂದು ಮನೆಯ ಮುಂದೆ ನಿಂತ.
"ತಮಾಷೆ ಮಾಡ್ಬೇಡಿ ನೀವು. ಕೂತೇ ಬಿಡ್ತೀನಿ, ನೋಡ್ಕೊಳ್ಳಿ."
"ತಮಾಷೆ ಯಾತಕ್ಕೆ? ಬಾ ಒಳಕ್ಕೆ."
ಪೆಟ್ಟಿಗೆ ಕೆಳಗಿಡೆಂದು ಆಳಿಗೂ ಜಯದೇವ ಹೇಳಿದ.
ಇವರನ್ನೆಲ್ಲ ಕಂಡು ಮನೆಯೊಡತಿ ಬಾಗಿಲ ಬಳಿಗೆ ಬಂದು ಅಂದಳು:
"ಬನ್ನಿ. ಒಳಗ್ಬನ್ನಿ."
ಪಿಸುಗುಟ್ಟುತ್ತ ಸುನಂದಾ ಕೇಳಿದಳು:
“ಯಾರ ಮನೇಂದ್ರೆ ಇದು?"
“ಕರೀತಾ ಇದಾರೆ. ಬಾ ಹೋಗೋಣ."
ಮನೆಯೊಡತಿ ಮತ್ತೂ ಅಂದಳು:
"ಇನ್ನೇನು ಬಂದ್ಬಿಡ್ತಾರೆ. ಒಳಗ್ಬಂದು ಕೈಕಾಲು ತೊಳ್ಕೊಳ್ಳಿ."
"ಇದೇನಾ ನಂಜುಂಡಯ್ಯನವರ ಮನೆ?" ಎಂದಳು ಸುನಂದಾ,ತಾನು ಮೊದಲೇ
ಊಹಿಸದೆ ಬೇಸ್ತುಬಿದ್ದೆ ಎಂದು ಸಂಕಟಪಡುತ್ತ.
ಜಯದೇವ ನಸುನಕ್ಕ.
ಹಳೆಯ ಕಾಲದ ಮನೆ. ಕಿಟಕಿಗಳು ಚಿಕ್ಕವಾಗಿದ್ದರೂ ಗೋಡೆಗಳು ದಪ್ಪಗಿದ್ದು
ಭದ್ರವಾಗಿದ್ದುವು. ಅಲ್ಲಿಯೆ ಇತ್ತು ನಂಜುಂಡಯ್ಯನವರ ಕೊಠಡಿ. ಜಯದೇವನಿಗೆ
ಚೆನ್ನಾಗಿ ನೆನಪಿತ್ತು: ಪುಸ್ತಕಗಳು ತುಂಬಿದ ಬೀರುಗಳೆರಡು. ರಾಜಾ ರವಿವರ್ಮ
ನಿಂದ ಮೊದಲಾಗಿ ಒಂದು ಪಾಶ್ಚಾತ್ಯ ವಕ್ರಕೃತಿಯವರೆಗೆ ಗೋಡೆಯ ಮೇಲೆ ಚಿತ್ರ
ಗಳು. ಬಾಗಿಲಿಗೆ, ಬಣ್ಣ ಬಣ್ಣದ ಗಾಜಿನ ಮಣಿಗಳನ್ನು ಹೊತ್ತಿದ್ದ ತೆಳು ಪರದೆ.
ನಯನಾಜೂಕು ಇಲ್ಲದೆ ಹೋದರೂ ಒಳ್ಳೆಯ ಮರದಿಂದ ಮಾಡಿದ ಮೇಜು
ಕುರ್ಚಿಗಳು...
ಎಲ್ಲವೂ ಹಿಂದಿನಂತೆಯೇ...
“ನೀವು ಸ್ನಾನ ಮಾಡಿ. ಅಷ್ಟೊತ್ತಿಗೆ ಬಂದ್ಬಿಡ್ತಾರೆ," ಎಂದಳು ಮನೆಯ
ಯಜಮಾನಿತಿ.