ಪುಟ:ನವೋದಯ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

352

ಸೇತುವೆ

ಆಳನ್ನು ಕಳುಹಿಕೊಟ್ಟು ಜಯದೇವ ಹೇಳಿದ:
"ಆರೋಗ್ಯವಾಗಿದೀರಾ ಅಮ್ಮ? ಮರೆತು ಬಿಟ್ಟಿರೀಂತ ತೋರುತ್ತೆ."
"ಇಲ್ಲರೀ ಇಲ್ಲ."
ಆರೋಗ್ಯವಾಗಿದೀರಾ? ಎನ್ನುವ ಪ್ರಶ್ನೆಗೆ ಉತ್ತರಕೊಡುವುದನ್ನು ಆಕೆ
ಮರೆತಳು.
"ನೋಡಿ. ಈ ಸಲ ಒಬ್ನೇ ಬಂದಿಲ್ಲ."
“ಸಂತೋಷರಿ. ಇಬ್ಬರೂ ಬರ್ತೀರೀಂತ ಅವರು ಹೇಳಿದ್ದಾರೆ...."
ಸುಮಾರು ಐದು ವರ್ಷದ ಹೆಣ್ಣು ಮಗುವೊಂದು ಲಂಗದ ತುದಿಯನ್ನು
ಚೀಪುತ್ತ ಎದುರು ಬಂದು ನಿಂತಿತು.
“ಈಕೆ ನಿಮ್ಮ ಎರಡ್ನೆ ಮಗಳು ಅಲ್ವೆ? ಹೋದ್ಸಲ ಬಂದಾಗ ಚಿಕ್ಕವಳಾಗಿದ್ಲು.”
"ಹೌದ್ರೀ."
“ದೊಡ್ಡವಳೆಲ್ಲಿ?"
"ಸ್ಕೂಲ್ಗೋಗಿದಾಳೆ. ಇನ್ನು ಸ್ವಲ್ಪೊತ್ನಲ್ಲಿ ಅವಳೂ ಬಂದ್ಬಿಡ್ತಾಳೆ. ಈಗೆಲ್ಲ
ಬೆಳಗ್ಗೇನೇ ಶಾಲೆ ಮಾಡವ್ರೆ."
“ಹೌದು. ಹಾಗೇಂತ ಕೇಳ್ದೆ. ಎಲ್ಲಿ ನಿಮ್ಮ ಅತ್ತೆಯವರು ಕಾಣಿಸ್ತಾ ಇಲ್ವಲ್ಲ?"
ಆ ಪ್ರಶ್ನೆ ಅನಿರೀಕ್ಷಿತವಾಗಿತ್ತೇನೋ ಎಂಬಂತೆ ಆಕೆ ಒಂದು ನಿಮಿಷ
ಅಳುಕಿದಳು.
"ಯಾಕ್ರೀ, ನಿಮಗೆ ಗೊತ್ತೇ ಇಲ್ಲೇನು? ನಮ್ಮ ಅತ್ತೆಯವರು ತೀರ್ಕೊಂಡು
ಆಗಲೇ ಒಂದು ವರ್ಷವಾಯ್ತು."
ಆಕೆಯ ಮಟ್ಟಿಗೆ ಅತ್ತೆಯ ಸಾವು ಬಹು ಮುಖ್ಯ ವಿಷಯವೇ; ಜಯದೇವನಿಗೆ
ಅದು ತಿಳಿಯದೆ ಇರುವುದಂತೂ ಆಶ್ಚರ್ಯದ ಸಂಗತಿಯೇ.
"ಅಯ್ಯೊ ಪಾಪ."
ಅಷ್ಟರಲ್ಲಿ ಹೆಬ್ಬಾಗಿಲಿನಾಚೆ ಬೂಟಿನ ಸಪ್ಪಳ ಕೇಳಿಸಿತು. ಅದರ ಜತೆಯಲ್ಲೆ
ನಂಜುಂಡಯ್ಯನವರ ಸ್ವರವೂ ಬಂತು.
"ಹಲ್ಲೋ, ಅಂತೂ ಬಂದೇ ಬಿಟ್ಟಿರಾ? ಭೇಷ್! ಬಹಳ ಸಂತೋಷ!"
ಆತ್ಮೀಯತೆಯನ್ನು ಸಾರುವ ಹಸ್ತಲಾಘವ.
"ಆರೋಗ್ಯವೆ ಸಾರ್?"
ತನಗಿಂತ ಹಿರಿಯವನೆಂದು ತೋರಿಸಬೇಕಾದ ಗೌರವಕ್ಕೆ ಆ ಸಾರ್ ಪದ ಅಗತ್ಯ
ವಾಗಿತ್ತು.
"ಇಷ್ಟರ ಮಟ್ಟಿಗಿದೀನಿ, ಜಯದೇವ್."
ಸುನಂದೆಯತ್ತ ఒಮ್ಮೆ ನೋಡಿ, ಜಯದೇವನ ಬೆನ್ನಿಗೆ ಸಲಿಗೆಯಿಂದ ಗುದ್ದಿ
ಅವರೇ ಅಂದರು: