ಪುಟ:ನವೋದಯ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

353

"ಸಾಹಸಿ ಕಣ್ರೀ ನೀವು! ಅದ್ಭುತ ಮನುಷ್ಯ! ಹೇಳಿದ ಹಾಗೆ ಮಾಡಿಯೇ
ಬಿಟ್ಟಿರಲ್ಲ!"
"ನೆನಪಿದೆಯೇ ನಂಜುಂಡಯ್ಯನವರೇ? ಹೋದ ಸಾರೆ ಬಂದಿದ್ದಾಗ ಹೇಳಿದ್ರಿ_
ನನ್ನನ್ನು ಕಂಡರೆ ಅಸೂಯೆಯಾಗುತ್ತೇಂತ. 'ಯಾಕೆ' ಅಂತ ನಾನಂದಿದ್ದೆ. 'ನೀವು
ಭಾಗ್ಯಶಾಲಿ. ಒಬ್ಬರೇ ಇದೀರ. ಭುಜಕ್ಕಿನ್ನೂ ನೊಗ ತಗಲಿಸಿಕೊಂಡಿಲ್ಲ,' ಅಂದಿದ್ರಿ.
ಈಗ__"
"ಹೊ ಹ್ಹೋ!" ಎಂದು ನಂಜುಂಡಯ್ಯ ನಕ್ಕರು.
"ನಿಮ್ಮ ಜ್ಞಾಪಕಶಕ್ತಿ ಜೋರಾಗಿಯೇ ಇದೆ," ಎಂದು ಪ್ರಶಂಸೆಯ ಮಾತನ್ನೂ
ಆಡಿದರು.
ಏನೋ ಮರೆತು ಹೋಗಿದ್ದವನಂತೆ ಜಯದೇವ, ಪರಸ್ಪರರ ಪರಿಚಯ ಮಾಡಿ
ಕೊಡುತ್ತ ಅಂದ:
"ಇವರು ನಂಜುಂಡಯ್ಯನವರು; ಇವರು ಸುನಂದಾ."
ನಂಜುಂಡಯ್ಯ ಸುನಂದೆಯರೊಳಗೆ ನಮಸ್ಕಾರ ಪ್ರತಿನಮಸ್ಕಾರಗಳಾದುವು.
"ನಿಮ್ಮ ಜಯದೇವರು ದೊಡ್ಡ ಕ್ರಾಂತೀನೇ ಮಾಡ್ಬಿಟ್ರಮ್ಮ ಈ ಊರಿಗೆ
ಬಂದು. ಅವರು ಇಲ್ಲಿದ್ದ ಒಂದು ವರ್ಷ_ಅಬ್ಬ! ನೆನಸಿಕೊಂಡರೆ ಈಗಲೂ ಮೈ
ಮುಳ್ಳಾಗುತ್ತೆ."
"ಇದು ಹೊಗಳಿಕೇನಾ ತೆಗಳಿಕೇನಾ, ಸಾರ್?" ಎಂದು ಜಯದೇವ ಕೇಳಿದ.
"ಇದರಲ್ಲಿ ವಿನಯದ ಮಾತೇ ಇಲ್ಲ ಜಯದೇವ್. ನೀವು ಮಾಡಿದ್ದೇ
ಉಂಟಂತೆ, ನಾನು ಹೇಳೋದೇನು ದೊಡ್ಡ ವಿಷಯ?"
"ಹಾಗಾದರೆ, ಈ ಊರಲ್ಲಿದ್ದು ನಿಮಗೆಲ್ಲ ತೊಂದರೆ ಕೊಟ್ಟೆ ಅನ್ನಿ!"
"ಛೆ! ಛೆ! ಉಂಠೆ ಎಲ್ಲಾದರೂ? ತೊಂದರೆ ಕೊಟ್ಟೋರು ಬೇರೆ ಜನ. ಅವ
ರೆಲ್ಲಾ ಇಲ್ಲಿಂದ ಹೊರಟೂ ಹೋದ್ರು."
ಇನ್ನು ಆರಂಭವಾಯಿತು ಎಂದುಕೊಂಡ ಜಯದೇವ. ಆದರೆ, ಈಗ ಆತನಿಗೆ
ಸಾಕಷ್ಟು ಅನುಭವವಿತ್ತು. ವ್ಯಕ್ತಿಗಳ ಪರಿಚಯವಿತ್ತು. ಮಾತು ಮಾತಿಗೂ ಮುಖ
ಬಾಡಿಸಿ ಬೇಸರಪಡಬೇಕಾದ ಅಗತ್ಯವಿರಲಿಲ್ಲ.
ಆತ ಕೇಳಿದ:
"ನನ್ನ ಕಾಗದ ಆಗಲೆ ಬಂತಲ್ವೆ?"
"ಒಂದಲ್ಲ, ಎರಡು ಕಾಗದ."
“ಎರಡು?”
"ಹೂ೦. ಒಂದನ್ನ ನಂಜುಂಡಯ್ಯನವರಿಗೆ ಬರೆದಿದ್ರಿ. ಇನ್ನೊಂದನ್ನ
ಮುಖ್ಯೋಪಾಧ್ಯಾಯರಿಗೆ."

45