ಪುಟ:ನವೋದಯ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

357

ಇಲ್ಲ. ಚಿಕ್ಕ ವಯಸ್ಸೂಂತ ಇಟ್ಕೊಳ್ಳೋಣ. ಇಲ್ಲೇ ಒಂದು ಹೈಸ್ಕೂಲಿದ್ದಿದ್ರೆ
ಮಗಳ್ನ ಓದಿಸ್ಬಹುದಾಗಿತ್ತು, ಅಂದ್ಲು. ಆಮೇಲೆ ಟೀಚರ್ ಕೆಲಸಾನೋ ಅದೋ
ಇದೋ-"
ಆ ಪ್ರಸ್ತಾಪ ಜಯದೇವನಿಗೆ ಅಪ್ರಿಯವೆನಿಸಲಿಲ್ಲ. ಆದರೆ ಸ್ವರ ತಗ್ಗಿಸಿ
ನಂಜುಂಡಯ್ಯ ಮಾತನಾಡಿದುದು ಆತನಿಗೆ ತಮಾಷೆಯಾಗಿ ತೋರಿತು. ಗಟ್ಟಿ
ಯಾಗಿಯೆ ಆತನೆಂದ:
"ಆ ಇಂದಿರೇನ ತೋರಿಸ್ಕೊಡ್ತೀನೀಂತ ನನ್ನ ಹೆಂಡತಿಗೆ ಬೇರೆ ಹೇಳಿದೀನಪ್ಪ.
ಇಬ್ಬರೂ ಬಂದಾಗ ಊಟಕ್ಕೆ ಬರಬೇಕೂಂತಲೂ ಆವತ್ತೆ ಕರೆದಿದಾರೆ."
"ಓಹೋ. ನಿಮ್ಮ ಮನೆಯವರಿಗೆ ಪ್ರತಿಯೊಂದು ವಿಷಯವೂ ತಿಳಿಸಿಬಿಟ್ಟಿ ದೀರಿ ಹಾಗಾದರೆ."
"ನಮ್ಮೊಳಗೆ ಮುಚ್ಚುಮರೆ ಹ್ಯಾಗೆ ಸಾಧ್ಯ?"
ನಂಜುಂಡಯ್ಯ ಸುನಂದೆಯ ವಿದ್ಯಾಭ್ಯಾಸದ ವಿಷಯವಾಗಿ ಪ್ರಶ್ನಿಸಿದರು. ಪದ
ವೀಧರೆಯೇ ಎಂಬ ಅವರ ಊಹೆ ಸುಳ್ಳಾಗಿತ್ತು. ಆದರೂ ಅತೃಪ್ತಿಗೆ ಅವಕಾಶ
ವಿರಲಿಲ್ಲ.
"ವಿದುಷಿಯಾದ ಹೆಂಡತಿ. ಅನುಕೂಲೆ. ಇನ್ನೇನ್ರಿ ಬೇಕು? ನಮ್ಮನೇಲಿ
ನೋಡಿದಿರೋ ಇಲ್ಲವೋ. ಓದೋಕೆ ಬಂದರೂ ಪುಸ್ತಕ ಮುಟ್ಟೋದಿಲ್ಲ.
ಏನ್ಹೇಳ್ತೀರಾ?"
“ಆದರೆ ಅವರ ಲೋಕಾನುಭವ ಈಗಿನ ಹುಡುಗೀರಿಗೆ ಎಲ್ಲಿ ಬರಬೇಕು?"
ನಂಜುಂಡಯ್ಯನಿಗೆ ಮನಸ್ಸಮಾಧಾನವಾಗಲೆಂದು ಹೇಳಿದ ಮಾತು.
"ಲೋಕಾನುಭವಕ್ಕೇನ್ರಿ? ಎರಡು ಹೆತ್ಮೇಲೆ ತಾನಾಗಿಯೇ ಎಲ್ಲಾ ಅನುಭವವೂ
ಬರುತ್ತೆ."
ಅದೇ ಕೊನೆಯ ಅಭಿಪ್ರಾಯವೆಂಬಂತೆ ಕೈಯಲ್ಲಾಡಿಸಿದರು ನಂಜುಂಡಯ್ಯ.
ಗಂಡಸರ ಸ್ನಾನವೂ ಮುಗಿದ ಬಳಿಕ ಅವರೆಲ್ಲ ಊಟಕ್ಕೆ ಕುಳಿತರು. ಒಂದು
ಸಾಲಿನಲ್ಲಿ ಜಯದೇವ ಮತ್ತು ಸುನಂದಾ. ಅದಕ್ಕೆ ಅಡ್ಡವಾಗಿ ನಂಜುಂಡಯ್ಯ ಮತ್ತು
ಮಕ್ಕಳು.
ಚಿಕ್ಕವಳನ್ನು ಕುರಿತು ನಂಜುಂಡಯ್ಯ ಹೇಳಿದರು:
"ಹೊಸ ಮುಖ ಅಂತ ಸುಮ್ನಿದಾಳೆ ಪೋರಿ. ಇಲ್ದೇಹೋದ್ರೆ ಕೇಳ್ಬೇಡಿ
ಆಕೆಯ ತುಂಟತನ. ಸಾಕಪ್ಪಾ ಅನಿಸಿ ಹೋಗುತ್ತೆ."
"ಈ ವಯಸ್ನಲ್ಲಿ ತುಂಟತನ ಸ್ವಾಭಾವಿಕ," ಎಂದ ಜಯದೇವ. ಸುನಂದೆಯ
ಕಡೆಗೆ ತಿರುಗಿ, "ಅಲ್ವಾ?" ಎಂದೂ ಕೇಳಿದ.
"ಅವರನ್ನೇನು ಕೇಳ್ತೀರಿ, ಪಾಪ!" ಎಂದು ನಂಜುಂಡಯ್ಯ ನಕ್ಕರು.
ಸುನಂದೆಯ ಮುಖ ಕೆಂಪಗಾದರೂ ಆಕೆ ಮುನಿದುಕೊಳ್ಳಲಿಲ್ಲ.