ಪುಟ:ನವೋದಯ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

359

ಯಲ್ಲೆ ಒಂದೇ ಆವರಣದೊಳಗೆ ವಾಸ ಮಾಡುವ ಇಚ್ಛೆ ಏನೇನೂ ಆತನಿಗೆ ಇರಲಿಲ್ಲ.
“ಯಾಕೆ, ಬಾಡಿಗೆಗೆ ಬೇರೆ ಮನೆ ಸಿಗೋದು ಅಷ್ಟೊಂದು ಪ್ರಯಾಸವೆ?"
"ಹಾಗೇನಿಲ್ಲ. ಹುಡುಗರಿಗೆ ಮೊನ್ನೆಯೇ ಹೇಳ್ದೆ. ಎರಡು ಮೂರು ನೋಡಿ
ಟ್ಟಿದಾರೆ. ಯಾವುದು ಅನುಕೂಲವಾಗುತ್ತೋ ಅದನ್ನ ಆರಿಸ್ಕೊಳ್ಳಿ....ಏನಿದ್ದರೂ
ಬೆಂಗಳೂರಲ್ಲಿ ವಾಸವಾಗಿದ್ದೋರಿಗೆ ಈ ಊರು ಹಿಡಿಸೋದು ಸ್ವಲ್ಪ ಕಷ್ಟವೇ. ಸರಿ
ತಾನೆ?"
ಕೊನೆಯ ವಾಕ್ಯವಿದ್ದುದು ಸುನಂದೆಯನ್ನುದ್ದೇಶಿಸಿ. ಆಕೆ ನಂಜುಂಡಯ್ಯನ
ದೃಷ್ಟಿಯನ್ನಿದಿರಿಸಿ ಮುಗುಳುನಕ್ಕು ಅಂದಳು:
"ಅಂಥದೇನಿಲ್ಲ."
"ಗೊತ್ತು,ಗೊತ್ತು, ಇದ್ದರೂ ಕೂಡಾ ನಾಲ್ಕು ದಿವಸದಲ್ಲಿ ಸರಿ ಹೋಗುತ್ತೆ,"
ಎಂದರು ನಂಜುಂಡಯ್ಯ.
ಊಟದ ಬಳಿಕ ಅಡಿಕೆ ಎಲೆ ಬಂತು. ನಂಜುಂಡಯ್ಯ, ಬಂಗಾರದ ಗಿಲೀಟು
ಹಾಕಿದ್ದ ತಮ್ಮ ಸಿಗರೇಟು ಕೇಸು ಹೊರತೆಗೆದರು.
"ಈಗಲಾದರೂ ನೀವು ಸೇದಬಹುದೊ?"
ಸುನಂದಾ ಕಳವಳದಿಂದ ಗಂಡನ ಮುಖ ನೋಡಿದಳು. ಆ ನೋಟವನ್ನು
ಗಮನಿಸಿದ ಜಯದೇವನೆಂದ:
"ಬೇಡಿ. ಕ್ಷಮಿಸಿ."
"ಮದುವೆಯಾದ ಮೇಲೂ ಇದೆಂಥಾದ್ರಿ ಮಡಿ? ಯಾಕೆ, ನಿಮ್ಮವರು ఆಕ್ಷೇಪಿ
ಸ್ತಾರೋ?"
ಸುನಂದಾ ಕತ್ತು ಕೊ೦ಕಿಸಿ ನುಡಿದಳು:
"ನನ್ನ ಆಕ್ಷೇಪವೇನೂ ಇಲ್ಲವಪ್ಪ."
"ಸರಿ ಮತ್ತೆ. ತಗೊಳ್ಳಿ."
"ತಗೊಳ್ಲೇನ್ರಿ?" ಎಂದ ಜಯದೇವ, ಹೆಂಡತಿಯ ಕಡೆ ನೋಡಿ.
"ಹಹ್ಹಾ! ನಿಮ್ಮನ್ನು ನೋಡಿದರೆ ಕನಿಕರವಾಗುತ್ತೆ ಜಯದೇವ್."
“ಒಂದು ತಗೊಳ್ಳಿ," ಎಂದಳು. ಸುನಂದಾ, ಪ್ರಪಂಚದಲ್ಲಿ ತನಗಿಂತ ಹೆಚ್ಚಿನ
ಸುಖಿ ಇರುವುದು ಸಾಧ್ಯವಿಲ್ಲವೆಂಬ ಠೀವಿಯಿಂದ.
ನಂಜುಂಡಯ್ಯ ಕೊರೆದ ಕಡ್ಡಿ ಜಯದೇವನ ಸಿಗರೇಟನ್ನೂ ಸುಟ್ಟಿತು. ಮೊದಲ
ಕೆಮ್ಮಿನ ಬಳಿಕ, ಆತನ ಬಾಯಿಯಿಂದಲೂ ಹೊಗೆ ಸರಾಗವಾಗಿ ಹೊರಟಿತು.
ಆ ಸಂಭಾಷಣೆಯನ್ನು ಕೇಳಿದ ಮನೆಯೊಡತಿ ಸೆರಗಿನಿಂದ ನಗು ಮರೆಸಿ ಒಳ
ಹೋದಳು.
ಸುನಂದೆಗೆ ಸಾಮಾನುಗಳ ಚಿಂತೆ ಹತ್ತಿತು.
ಎಷ್ಟೆಂದರೂ ಯಜಮಾನಿತಿ. ಎಚ್ಚರಿಕೆವಹಿಸಬೇಕಾದುದು ಸ್ವಾಭಾವಿಕ.