ಪುಟ:ನವೋದಯ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

366

ಸೇತುವೆ

“ಇನ್ನೂ ಸರಿಯಾಗಿ ಊರು ನೋಡಿಲ್ವಲ್ಲ", ಎಂದಳು ಸುನಂದಾ.
"ಇಷ್ಟವಾಗುತ್ತೆ, ಆಗದೆ ಏನು?" ಎಂದ ಜಯದೇವ.
ನಂಜುಂಡಯ್ಯ ನಿಧಾನವಾಗಿ ನಡೆಯುತ್ತ, ನಡಿಗೆಗೆ ಅನುಗುಣವಾಗಿ ಸಾವಧಾನ
ವಾಗಿ ಮಾತನಾಡಿದರು:
"ಈಗ ನೋಡೋದಕ್ಕೆ ಕೊಂಪೆಯ ಹಾಗಿದೆ ಊರು. ಇನ್ನೂ ಸ್ವಲ್ಪ ಕಾಲಾವ
ಕಾಶ ಕೊಡಿ. ಒಂದು ಹೈಸ್ಕೂಲು, ವಿದ್ಯಾರ್ಥಿ ನಿಲಯ, ಉದ್ಯಾನ, ಪೌರಸಭಾ ಭವನ,
ಆಸ್ಪತ್ರೆ, ರೈಸ್ ಮಿಲ್ಲು, ಮಾರ್ಕೆಟ್ಟು, ಒಂದು ಸಿನಿಮಾ ಥಿಯೇಟರು-ಇವೆಲ್ಲ
ನಿರ್ಮಾಣವಾದ ಮೇಲೆ ನೋಡುವಿರಂತೆ. ಈ ಗುಡಿಸಲುಗಳೂ ಅಷ್ಟೆ. ಇವನ್ನೆಲ್ಲ
ಕಿತ್ತುಹಾಕಿಸಿ ಕಡಮೆ ಖರ್ಚಿನಲ್ಲಿ ತಾರಸಿ ಮನೆಗಳನ್ನು ಕಟ್ಟಿಸ್ಬೇಕು. ಪ್ರತಿಯೊಂದನ್ನು
ಯೋಜನೆ ತಯಾರಿಸ್ಬೇಕು."
ಇಂಪಾದ ಮಾತು. ಭವಿಷ್ಯತ್ತಿನಲ್ಲಿ ಅವರಿಗಿದ್ದ ನಂಬುಗೆಯಂತೂ ಅಪ್ರತಿಮ
ವಾಗಿತ್ತು.
ಜಯದೇವ ಕೇಳಿದ:
"ರಾಷ್ಟ್ರದ ಪಂಚವಾರ್ಷಿಕ ಯೋಜನೇಲಿ ಈ ಊರು ಸೇರ್ಕೊಳ್ಳೋದಿಲ್ಲ,
ಅಲ್ವೆ?"
"ಸೇರಿಸೋರು ಯಾರು? ನಮ್ಮೂರಿನವರೇನು ಸರ್ಕಾರದಲ್ಲಿ ಮಂತ್ರಿಗಳಾಗಿ
ದಾರೆಯೆ? ಅಥವಾ ಯಾರಾದರೂ ಬಲಾಢ್ಯರು ನಮ್ಮಲ್ಲಿ ಇದಾರೆಯೆ? ಮೊದಲ
ಪಂಚವಾರ್ಷಿಕ ಯೋಜನೆಯಿಂದಂತೂ ನಮ್ಮೂರಿಗೆ ಪ್ರಯೋಜನವಾಗಲಿಲ್ಲ. ಎರಡ
ನೇದರಲ್ಲೂ ನಮಗೆ ಸ್ಥಾನ ಸಿಗೋದು ಅಸಂಭವ. ನಾನ್ಹೇಳ್ತೀನಿ ಜಯದೇವ್.
ನಾವು ಸ್ವಾವಲಂಬಿಗಳಾಗ್ಬೇಕು. ನಮ್ಮೂರಿಗೆ ನಮ್ಮದೇ ಆದ ಒಂದು ಪಂಚವಾರ್ಷಿಕ
ಯೋಜನೆ ತಯಾರಿಸ್ಬೇಕು. ಏನಂತೀರಾ?"
"ಸರಿಯಾದ ಸಲಹೆ."
ಅನಂತರ, ಕಳೆದ ಪಂಚಾಯತ್ ಬೋರ್ಡು ಚುನಾವಣೆಯಲ್ಲಿ ಶಂಕರಪ್ಪ
ನವರನ್ನು ಉರುಳಿಸಲು ಎದುರು ಪಾರ್ಟಿಯವರು ನಡೆಸಿದ ಫಿತೂರಿಯ ವಿವರವನ್ನು
ನಂಜುಂಡಯ್ಯ ಕೊಟ್ಟರು. ಆಗ ಅವರು ಬಳಸಿದ ಪದಗಳು ಕರ್ಣಕಠೋರವಾಗಿದ್ದುವು.
ಒಂದು ನಿಮಿಷದ ಹಿಂದೆ ಊರಿನ ಪುನರ್ನಿಮಾಣದ ಮಾತನ್ನಾಡುತ್ತಿದ್ದ ಮನುಷ್ಯನೆ
ಈ ಮಾತುಗಳನ್ನೂ ಆಡುತ್ತಿದ್ದರೆ? ಎಂದು ಸಂದೇಹ ಹುಟ್ಟಿಸುವ ಹಾಗಿತ್ತು, ಅವರ
ವಾಗ್ಝರಿ.
ಸುನಂದೆಗೆ ಆ ಸಂಭಾಷಣೆಯಲ್ಲಿ ಆಸಕ್ತಿ ಕಡಮೆಯಾಯಿತು. ಮೂವರ ಆ
ಮೆರವಣಿಗೆಯನ್ನು ಎಲ್ಲರೂ ನೋಡುವವರೇ. ಜನರ ದೃಷ್ಟಿಗಳು ತಮ್ಮ ಮೇಲೆ
ನೆಟ್ಟಿದ್ದುವೆಂದು ನಂಜುಂಡಯ್ಯನಿಗೇನೂ ಸಂಕೋಚವೆನಿಸಲಿಲ್ಲ. ತಾವು ಇತರರಿಗಿಂತ
ಮೇಲು ಎಂಬ ಆತ್ಮವಿಶ್ವಾಸದಿಂದಲೆ ಯಾವಾಗಲೂ ಬೀದಿ ನಡೆದ ವ್ಯಕ್ತಿ ಅವರು.
ಹಾದಿಯುದ್ದಕ್ಕೂ ತಮಗೆ ನಮಸ್ಕರಿಸಿದವರಿಗೆ, ಆ ಜನರನ್ನು ಕಡೆಗಣ‍್ಣಿನಿಂದಷ್ಟೆ