ಪುಟ:ನವೋದಯ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

368

ಸೇತುವೆ

ಏನ್ಹೇಳ್ತೀರಾ?"
ಜಯದೇವ ಸುನಂದೆಯ ಕಡೆ ತಿರುಗಿ ಹೇಳಿದ:
"ಇದೇ ಇದ್ಕೊಳ್ಲಿ. ಆಗದಾ?"
"ಹೂಂ," ಎಂದಳು ಸುನಂದಾ. ಮನೆ ಅವಳ ಮನಸ್ಸಿಗೆ ಬಂದಿತ್ತು. ನಿಂತಲ್ಲೆ
ಆಕೆ, ಮನೆಯ ಒಳ ಭಾಗವನ್ನು ಹೇಗೆ ವ್ಯವಸ್ಥೆಗೊಳಿಸಬೇಕೆಂದು ತನ್ನಷ್ಟಕ್ಕೆ ಎಣಿಕೆ
ಹಾಕಿದಳು."
"ಗೃಹಪ್ರವೇಶ ಯಾವತ್ತು?" ಎಂದು ನಂಜುಂಡಯ್ಯ ಕೇಳಿದರು.
"ಇವತ್ತು ರಾತ್ರಿಯೇ," ಎಂದ ಜಯದೇವ, ಸ್ವಲ್ಪ ತಡವರಿಸುತ್ತ.
"ಛೆ! ಛೆ! ಇವತ್ತು ನಮ್ಮಲ್ಲೇ ವಾಸ. ಏನಿದ್ದರೂ ನಾಳೆ ಬೆಳಗ್ಗೆ ಮಾಡಿ.
ನಾಡದು ಕೆಲಸಕ್ಕೆ ಸೇರ್ಕೊಂಡರಾಯ್ತು."
"ನಮ್ಮಿಂದಾಗಿ ನಿಮಗೆ ಇಲ್ಲದ ತೊಂದರೆ."
"ಆ ಮಾತು ಆಡ್ಬೇಡಿ."
ಮೋಡಗಳು ಸ್ವಲ್ಪ ಚೆದರಿದಂತಾಗಿ ಸಂಜೆ ಸೂರ್ಯನ ಹೊಂಬಣ್ಣ ಕಾಣಿಸಿತು.
ನಂಜುಂಡಯ್ಯ ಆಕಾಶವನ್ನೂ ನೋಡಿದರು; ತಮ್ಮ ಕೈಗಡಿಯಾರವನ್ನೂ
ನೋಡಿದರು.
"ಇನ್ನೂ ಹೊತ್ತಿದೆ. ನಿಮ್ಮ ಹಳೇ ಶಾಲೆ ನೋಡ್ಕೊಂಡು ಹೋಗೋಣ್ವೇ
ನಪ್ಪಾ?" ಎಂದು ಅವರು ಕೇಳಿದರು. "ನಿಮ್ಮ ಮನೆಯವರಿಗೆ ಆಯಾಸವಾಗುತ್ತೊ ಎನೊ?" ಎಂಬ ಸಂದೇಹವನ್ನೂ ವ್ಯಕ್ತಪಡಿಸಿದರು.
ಸುಮ್ಮನೆ ಅಲೆಯಲು ಸುನಂದಾ ಸಿದ್ಧಳಿರಲಿಲ್ಲ. ಆದರೆ, ಶಾಲೆ ಎಂಬ ಪದ
ಕೇಳಿದೊಡನೆ ಆಕೆ ಉತ್ಸಾಹಭರಿತಳಾದಳು. ತನ್ನ ಜಯದೇವ ಉಪಾಧ್ಯಾಯನಾಗಿ
ಪಾಠ ಹೇಳಿಕೊಡುವ ವಿದ್ಯಾಮಂದಿರವನ್ನು ನೋಡಲು ಆಕೆ ನಿರಾಕರಿಸುವುದುಂಟೆ?
"ನನಗೇನೂ ಆಯಾಸವಿಲ್ಲ, ಹೋಗೋಣ," ಎಂದಳು ಸುನಂದಾ.
ಹತ್ತು ಮಾರುಗಳಾಚೆಗೆ, ಆ ಖಾಲಿ ಮನೆಯ ಒಡೆಯರ ವಸತಿ ಇತ್ತು. ಮನೆ ಯನ್ನು ಸ್ವಚ್ಛಪಡಿಸಿ ಇಡುವಂತೆ ಮನೆ ಹೆಂಗಸರಿಗೆ ನಂಜುಂಡಯ್ಯ ಸೂಚನೆ ಇತ್ತರು.
"ಮೇಸ್ಟ್ರಿಗೆ ಮನೆ. ನಾನು ಹೇಳಿದೀನೀಂತ ತಿಳಿಸ್ಬಿಡಿ," ಎ೦ದರು.
ಶಾಲೆ ಸವೂಪಿಸಿದಂತೆ ಜಯದೇವನ ಹೃದಯದ ಬಡಿತ ವೇಗವಾಯಿತು.
ಎಷ್ಟೊಂದು ನೆನಪುಗಳು!
ವಿದ್ಯಾರ್ಥಿಗಳಿಲ್ಲದೆ ಇದ್ದಾಗ ತಾನು ಒಂಟಿ-ಎಂಬ ಭಾವನೆಗೆ ಎಡೆಕೊಡುತ್ತ
ಮಲಗಿದ್ದ ಕಿರುದಾರಿ. ದೂರದಿಂದ ಪುಟ್ಟ ಗೂಡಿನಂತೆ ಕಾಣಿಸುತ್ತಿದ್ದು ಸಮೀಪ
ಸಾಗಿದಂತೆ ದೊಡ್ಡ ಆಕಾರ ತಳೆಯುತ್ತಿದ್ದ ಕಟ್ಟಡ...
ಅಂಗಳದ ಸುತ್ತಲೂ ಬೇಲಿ ಇತ್ತು.
"ಓ! ತೋಟ ಮಾಡಿದಿರಾ? ಈ ಬೇಸಗೇಲಿ ಕೂಡ ಹಸುರಾಗಿದೆ."