ಪುಟ:ನವೋದಯ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

372

ಸೇತುವೆ

ಪುಟ್ಟ ಸಂಸಾರವೇನೋ ನಿಜ. ಗಂಡು ಮತ್ತು ಹೆಣ್ಣು-ಎರಡು ಗುಬ್ಬಚ್ಚಿಗಳು
ಮಾತ್ರ.ಆದರೆ ಗೂಡು ಸಿದ್ಧಗೊಳಿಸುವ ಕೆಲಸ ಯಾವ ದೃಷ್ಟಿಯಲ್ಲೂ ಅಲ್ಪ
ವಾಗಿರಲಿಲ್ಲ.
ಮೊದಲು ಸಾಮಾನುಗಳನ್ನು ಬಿಚ್ಚಿ ಸ್ಥೂಲವಾಗಿ ವಿಂಗಡಿಸಿ ಅಡುಗೆ ಮನೆಯ
ಉದ್ಘಾಟನೆಯನ್ನು ಸುನಂದಾ ಮಾಡಿದಳು. ಒಂದು ವಾರದಿಂದ ಸಾಮಾನುಗಳನ್ನು
ಆರಿಸಿ, ಸಂಗ್ರಹಿಸಿ, ಕೊ೦ಡುತ೦ದು, ಜೋಡಿಸಿದ್ದರು ಸುನಂದೆಯ ತಾಯಿ. ಮೊದಲ
ಎರಡು ದಿನಗಳಿಗೆ ಬೇಕಾಗುವಷ್ಟು ಅಕ್ಕಿ, ಬೇಳೆ, ಉಪ್ಪುಹುಳಿಖಾರಗಳೂ ಇದ್ದವು.
ಹಪ್ಪಳ ಸೆಂಡಿಗೆಗಳಿದ್ದುವು. ಎಣ್ಣೆ ಇರಲಿಲ್ಲವಾದರೂ ತುಪ್ಪವಿತ್ತು. ಕಟ್ಟಿಗೆಯೊಂದನ್ನೇ
ಸೇರಿಸಿ ಕಟ್ಟಿರಲಿಲ್ಲ ಆಕೆ!
ಮನೆಯ ಒಡೆಯರು ಸ್ವಚ್ಛ ಮಾಡಿದ್ದರೂ ಪೊರಕೆ ಕೈಲಿ ಹಿಡಿದು ಮೈ ಬಗ್ಗಿ
ಮಾಡಬೇಕಾದ ಕೆಲಸ ಮತ್ತೂ ಉಳಿದಿತ್ತು. ಜಯದೇವ ಆ ಕಡೆಗೆ ಗಮನವಿತ್ತ.
ಶಾಲೆಯ ಜವಾನ ಹೊತ್ತು ಹಾಕಿದ್ದ ಸೌದೆ ಹಸಿ. ಧಾರಾಳವಾಗಿ ಹೊಗೆ
ಯಾಡುತ್ತಿತ್ತು. ಆದರೆ ಬೆಂಕಿ ಮಿನುಗುತ್ತಿರಲಿಲ್ಲ. ಫ಼ೂಫ಼ೂ ಎಂದು ಊದಿ ಊದಿ
ಸಾಕಾಯಿತು ಸುನಂದೆಗೆ.
ಕೊನೆಯಲ್ಲಿ ನಿರುಪಾಯಳಾಗಿ ಆಕೆ ಕರೆದಳು:
"ಬನ್ನೀಂದ್ರೆ ಸ್ವಲ್ಪ."
ಗದ್ಗದಿತವಾಗಿದ್ದ ಕಂಠ. ಜಯದೇವ, ಕೈಲಿದ್ದ ಪೊರಕೆಯನ್ನು ಕೆಳಕ್ಕೂ ಇಡದೆ,
ಕಾತರಗೊಂಡೇ ಓಡಿ ಬಂದ.
"ಏನಾಯ್ತೆ?"
ಅಡುಗೆ ಮನೆಯ ತುಂಬ ಹೊಗೆ ಧಾಂದಲೆ ನಡೆಸಿತ್ತು. ಉರಿ ತಾಳಲಾಗದೆ
ಒಸರುತ್ತಿದ್ದ ಕಣ್ಣೀರನ್ನು ಸೆರಗಿನಿಂದ ಒರೆಸುತ್ತ ಸುನಂದಾ ಪರದಾಡುತ್ತಿದ್ದಳು.
ಗೊಳ್ಳೆಂದು ಬಿರಿಯಲು ಧಾವಿಸಿ ಬಂದ ನಗೆಯನ್ನು ತಡೆಹಿಡಿದು ಜಯದೇವ,
ಕಸಬರಿಕೆಯನ್ನು ಕೆಳಕ್ಕೆ ಬಿಸುಟು, ಸುನಂದೆಯನ್ನು ತಬ್ಬಿಕೊಂಡು, ಹಜಾರಕ್ಕೆಳೆದು
ತಂದ. ಆ ಅಪ್ಪುಗೆ ಆಹ್ಲಾದಕರವಾಗಿತ್ತು. ಸುನಂದಾ, ಕಣ್ಣೀರನ್ನು ಹಾಗೆಯೇ
ಹರಿಯಗೊಡುತ್ತ ನಕ್ಕಳು.
ಕಣ್ಣು ತೆರೆದು ಜಯದೇವನ ಮುಖನೋಡಿದಾಗ, ಆಶ್ಚರ್ಯದಿಂದ 'ಆಹ್ಹಾ!'
ಎಂದು ಉದ್ಗರಿಸುತ್ತ ಆಕೆಯೆಂದಳು.
"ಏನೂಂದ್ರೆ ಇದು ಮುಖದ ಮೇಲೆ? ಎಷ್ಟೊಂದು ಕರಿ ಮೆತ್ಕೊಂಡಿದೀರಾ!
ಮೀಸೆ ಬಂದಿದೇಂದ್ರೆ!"
ಜಯದೇವ ಬಾಗಿಲ ಕಡೆಗೊಮ್ಮೆ ಮಿಂಚಿನ ದೃಷ್ಟಿ ಬೀರಿದ, ಒಡನೆಯೇ