ಪುಟ:ನವೋದಯ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

373

ಆಕೆಯ ಮುಖದ ಮೇಲೂ ಮೀಸೆಗಳನ್ನು ಅಚ್ಚೊತ್ತಿದ.
ಸುನಂದಾ ಉಸಿರಿಗಾಗಿ ಚಡಪಡಿಸಿದಳು. ಹಿಡಿತದಿಂದ ಬಿಡಿಸಿಕೊಂಡಳು.
"ಅಹ್ಹಾ! ಅಮ್ನೋರಿಗೆ ಮೀಸೆ ಬಂದಿದೆ!" ಎಂದು ಗಟ್ಟಿಯಾಗಿ ಜಯದೇವ ನಕ್ಕ.
"ಥೂ! ಎನ್ನುತ್ತ, ಗೋಡೆ ಗೂಡಿನೊಳಗಿದ್ದ ಕನ್ನಡಿಯತ್ತ ಸುನಂದಾ ಓಡಿ
ದಳು. ಬಟ್ಟೆಗಳ ರಾಶಿಯಿಂದ ಅಂಗವಸ್ತ್ರವನ್ನು ಆರಿಸಿ ತೆಗೆದು ಮುಖ ಒರೆಸಿಕೊಂಡಳು.
ಜಯದೇವ ಅಡುಗೆ ಮನೆಯನ್ನು ಮರೆತು ಆ ದೃಶ್ಯವನ್ನೆ ನೋಡುತ್ತ ನಿಂತ.
ಆದರೆ ಹೊಗೆ ಅವರನ್ನು ಹುಡುಕಿಕೊಂಡು ಒಳ ಹಜಾರಕ್ಕೂ ಬಂತು.
ಆಗ ಎಚ್ಚೆತ್ತು ಜಯದೇವ ಅಡುಗೆ ಮನೆಯೊಳ ಹೊಕ್ಕು, ಗೋಡೆಯನ್ನು
ಪರೀಕ್ಷಿಸಿ, ಎತ್ತರದಲ್ಲಿದ್ದ ಎರಡು ಬೆಳಕಿಂಡಿಗಳನ್ನು ತೆರೆದ. ಕ್ರಮೇಣ ಹೊಗೆ ಅತ್ತ
ಸರಿಯಿತು. ಒಲೆಯ ಬುಡ ಸರಿಯಾಗಿ ಕಾಣಿಸಿದ ಬಳಿಕ ಜಯದೇವ ಬಲು ಪ್ರಯಾಸ
ಪಟ್ಟು, ಸೌದೆಗೆ ಬೆಂಕಿ ಅಂಟುವಂತೆ ಮಾಡಿದ.
ಸುನಂದಾ ಸಿದ್ಧಗೊಳಿಸಲು ಯತ್ನಿಸಿದ್ದು ಅನ್ನ ಮತ್ತು ಸಾರು ಮಾತ್ರ.
"ಒಂದಿಷ್ಟು ಎಣ್ಣೆ ಇಟ್ಟು ಸೆಂಡಿಗೆ ಕರೀಲೇನು?" ಎಂದು ಸುನಂದಾ ಕೇಳಿದಳು.
"ಏನೂ ಬೇಡ. ಆ ಬೇಳೆಯೊಮ್ಮೆ ಬೇಯಲಿ!"
"ಸ್ನಾನಕ್ಕೆ ಏನ್ಮಾಡ್ತೀರ? ಇನ್ನೊಂದು ಒಲೆ ಈಗ ಹಚ್ಚೋಕಾಗುತ್ತಾ?"
"ತಣ್ಣೀರೆ ಮಾಡ್ಬಿಡೋಣ. ಈ ಬಿಸಿಲಿಗೆ ತಂಪಗೂ ಇರುತ್ತೆ."
"ಬಿಸಿನೀರೇ ಸ್ನಾನ ಮಾಡ್ಬೇಕೂಂತ ಅಮ್ಮ ಹೇಳಿದಾಳೆ."
"ಇದೇನು ಮಲೆನಾಡು ಕೆಟ್ಹೋಯ್ತೆ ಸುನಂದಾ? ನಿಮ್ಮಮ್ಮ ಈ ಊರು
ನೋಡಿದ್ರೆ ತಾನೆ? ಇಲ್ಲಿಯ ಬಾವಿ ನೀರು ಕೂಡ ಕಾಯಿಸ್ದೆ ಕುಡೀಬಹುದು.
ಗೊತ್ತೇನು?"
"ಸರಿ," ಎಂದಳು ಸುನಂದಾ.
...ಹತ್ತಾರು ಹುಡುಗರು ಆ ಹಾದಿಯಾಗಿ ಓಡುವ ಸದ್ದು ಕೇಳಿಸಿತು.
"ಹೀಗೆ ಹುಡುಗರು ಓಡಿದಾಗ ಏನರ್ಥ ಹೇಳು."
"ಹುಡುಗರ ಹಿಂದೆ ಮೇಸ್ಟ್ರು ಬರ್ತಾರೆ; ಊಟಕ್ಕೆ ತಟ್ಟೆ ಇಡ್ಬೇಕೂಂತ."
"ಭೇಷ್!ನಾಳೆಯಿಂದ ಹಾಗೆಯೇ ನೆನಪಿಟ್ಕೊ."
"ಆಗಲಿ ಮಹಾಪ್ರಭು."
ಹುಡುಗರು ಮರೆಯಾದ ಕೆಲ ನಿಮಿಷಗಳಲ್ಲೆ ನಂಜುಂಡಯ್ಯ ಬಂದರು. ಜಯ
ದೇವನ ವೇಷವನ್ನು ನೋಡಿ ನಕ್ಕು ಅವರೆಂದರು:
"ಸೊಗಸಾಗಿ ಕಾಣ್ತೀರ!"
"ಬನ್ನಿ ಸಾರ್ ಒಳಕ್ಕೆ."
ಹಾಸಿಗೆಯ ಸುರುಳಿಯೊಳಗೆ ಅವಿತಿದ್ದ ಚಾಪೆಯನ್ನೆಳೆದು ಬಿಡಿಸುತ್ತ ಜಯದೇವ
ಹೇಳಿದ: