ಪುಟ:ನವೋದಯ.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

323


ಆತ 'ಗಲ್ಲ'ವನ್ನು ಸಮೀಪಿಸಿದಂತೆ ಹುಡುಗನ ಕೀರಲು ಧ್ವನಿ ಕೇಳಿಸಿತು:
“ದೋ ಇಸಂ__ಎಂಟಾಣೆ!"
ರೂಪಾಯಿಯ ನೋಟು ಕೊಟ್ಟು ಚಿಲ್ಲರೆ ಪಡೆಯುತಿದ್ದ ಜಯದೇವನ ದೃಷ್ಟಿ
ಮೇಜಿನ ಮೇಲಿದ್ದ ಪತ್ರಿಕೆಯ ಕಡೆಗೆ ಹೊರಳಿತು. ಹಿಂದಿನ ಸಂಜೆ ಬೆಂಗಳೂರಲ್ಲಿ
ಆತ ಓದಿದ್ದ ಶಿರೋನಾಮೆಯೆ. ದಿನಾಂಕ ಮಾತ್ರ ಆ ದಿನದ್ದು. ಜಯದೇವ, ಆ
ಉಪಾಹಾರ ಗೃಹದ ಒಡೆಯನ ಮುಖ ನೋಡಿದ. ಆ ವ್ಯಕ್ತಿಯೇ. ಮೂರು
ವರ್ಷಗಳಿಗೆ ಹಿಂದೆ ಜಯದೇವ ದುಡ್ಡು ಕೊಡುತ್ತ ಆತನೊಡನೆ ಚರ್ಚಿಸಿದ್ದ_ಪತ್ರಿಕೆ
ಆ ದಿನದ್ದೆ? ಹಳೆಯದೆ? ಎಂದು.
ಆದರೆ ಹೋಟೆಲಿನವನಿಗೇನೂ ಅದರ ನೆನಪಿದ್ದಂತೆ ತೋರಲಿಲ್ಲ. ಜಯ
ದೇವನ ಮುಖಪರಿಚಯವೂ ಆಗಲಿಲ್ಲ ಆತನಿಗೆ. ಸಾಲದುದಕ್ಕೆ, ಆಗಲೆ ಹೊರಕ್ಕಿಳಿದು
ನಿಂತಿದ್ದ ಸುನಂದಾ ಬೇರೆ ಆ ಮನುಷ್ಯನ ಗಮನವನ್ನು ಸ್ವಲ್ಪ ಮಟ್ಟಿಗೆ ಸೆಳೆದಿದ್ದಳು.
ಕೆಂಪು ಮೋಟಾರು ಹತ್ತು ಹೆಜ್ಜೆ ಆಚೆಗೆ ನಿಂತಿತ್ತು. ಎದುರು ಬದಿಯಿಂದ
ತಮ್ಮನ್ನು ಹಾದು ಹೋಟೆಲಿನೆಡೆಗೆ ಹೋದ ಖಾಕಿ ಉಡುಗೆಯ ಮೋಟಾರು ಚಾಲಕ
ನನ್ನೂ ಬೇರೆ ಒಬ್ಬಿಬ್ಬರನ್ನೂ ಗಮನಿಸದೆ ಜಯದೇವ ಮತ್ತು ಸುನಂದಾ ಬೇಗ
ಬೇಗನೆ ಹೆಜ್ಜೆಹಾಕಿದರು.
"ಬಸ್ನೊಳಗೆ ಬೇರೆ ಬೇರೆ ಕೂತ್ಕೊಬೇಕೇನೊ ನಾವು?" ಎಂದು ಸುನಂದಾ
ಬೇಸರದ ಸ್ವರದಲ್ಲಿ ಅಂದಳು.
"ಮಹಾ! ಒಂದು ಘಂಟೆ ಹೊತ್ತು ಬಿಟ್ಟಿರೋದಕ್ಕೆ ಆಗೊಲ್ವೇನೋ."
"ಹೂಂ. ಆಗುತ್ತೆ!"
ಹಾಗೆ ಹೇಳುವಾಗಲೆಲ್ಲ ಆಕೆ ಕತ್ತುಕೊಂಕಿಸುತ್ತಿದ್ದ ರೀತಿ ಮೋಹಕವಾಗಿರು
ತ್ತಿತ್ತು. ಜಯದೇವ, ಆ ನೋಟದ ಸವಿಯೂಟವನ್ನು ಕಳೆದುಕೊಳ್ಳಲು ಇಷ್ಟಪಡದೆ,
ಅವಸರವಾಗಿ ನಡೆಯುತ್ತಿದ್ದಾಗಲೂ ಅಕೆಯ ಕಡೆಗೊಮ್ಮೆ ದೃಷ್ಟಿಬೀರಿದ.
ನೂಕುನುಗ್ಗುಲು ಸ್ವಲ್ಪ ಮಟ್ಟಿಗಿತ್ತು. ಕಂಡಕ್ಟರು ಬಾಗಿಲಲ್ಲೆ ನಿ೦ತು
ಒಬ್ಬೊಬ್ಬರನ್ನೆ ಒಳಕ್ಕೆ ಬಿಡುತ್ತಿದ್ದ.
"ಸಾಮಾನು ಮ್ಯಾಕೆ ಆಕ್ತೀನಿ ಬುದ್ಧಿ," ಎಂದ ಆಳು, ಜಯದೇವನನ್ನು
ನೋಡಿ.
"ಹೂನಪ್ಪ."
ಆತ ಮೋಟಾರಿನ ಬಳಿಗೆ ಬಂದೊಡನೆ ಒಳಗಿನಿಂದ ಸ್ವರ ಕೇಳಿಸಿತು:
"ಮೇಸ್ಟ್ರೇ, ನಿಮಗೆ ಎರಡು ಸೀಟು ಇಟ್ಟಿದೀನಿ. ನಿಧಾನವಾಗಿ ಬನ್ನಿ."
ಹಾಗೆ ಹೇಳಿದವನು, ಜಯದೇವನನ್ನು ಆ ಬೆಳಗ್ಗೆ ಮಾತನಾಡಿಸಿದ್ದ ಮನುಷ್ಯ.
'ಮೇಸ್ಟ್ರೇ' ಎಂಬ ಸಂಬೋಧನೆ ಕೇಳಿ ಸುನಂದಾ ಜಯದೇವನತ್ತ ನೋಡಿದಳು.
ಶಾಲಾ ಉಪಾಧ್ಯಾಯನಾದ ಗಂಡ. ಆ ಒಂದು ಕ್ಷಣ, ಜಯದೇವನ ಕಿವಿಗಳೂ