ಪುಟ:ನವೋದಯ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

379

ವಾಪಸಾಗ್ತೀನಿ."
"ತಡ ಮಾಡಬೇಡಿ. ಒಬ್ಬಳಿಗೇ ಇಲ್ಲಿ ಬೇಜಾರಾಗುತ್ತೆ."
"ಮಧ್ಯರಾತ್ರೆಯೊಳಗೆ ಬಂದ್ಬಿಡ್ತೀನಿ!"
"ಆಂ! ನಾನು ಎಲ್ಲಿಗಾದರೂ ಹೊರಟ್ಹೋಗ್ತೀನಿ, ನೋಡ್ಕೊಳ್ಳಿ!"
"ವಾಪಸು ಬಂದೇ ಬರ್‍ತೀಯಾ. ಇಷ್ಟೊತ್ನಲ್ಲಿ ಊರಿಗೆ ಹೋಗೋಕೆ ಬಸ್ಸಿದ್ದರೆ
ತಾನೆ?"
ಸೋಲನ್ನೊಪ್ಪಿಕೊಳ್ಳುವ ಸಂದರ್ಭ ಬಂದರೂ ಕೊನೆಯ ಅಸ್ತ್ರ ತನ್ನದೇ ಎಂದು
ಸುನಂದಾ ಅಂದಳು:
“ಹೊರಡೋಕೆ ನಿಮಗೆ ಮನಸ್ಸೇ ಬರೊಲ್ವೇನೊ? ಇನ್ನೂ ಇಲ್ಲೇ ಇದೀರಿ!"
“ನಾನು ಕಣ್ಣೆದುರಿಗೆ ಇರೋದು ನಿನಗೆ ಇಷ್ಟವಿಲ್ಲವಾದರೆ, ಇಗೋ ಹೊರಟೆ!"
"ಟೈಂಪೀಸು ನೋಡ್ಕೊಂಡು ಹೋಗಿ. ನಡೀತಿದೆ. ಐದು ಘ೦ಟೆಗೆ ಐದು
ನಿಮಿಷ ಇದೆ ಈಗ. ಆರು ಘಂಟೆಗೆ ಆರು ನಿಮಿಷ ಇರೋದರೊಳಗೆ ಬರ್‍ತೀರಿ
ತಾನೆ?"
“ನೋಡೋಣ."
ನಿಂತು ಬೇಸರವಾಗಿದ್ದ ಜವಾನ ಅಂಗಳದಲ್ಲೆ ಕುಳಿತಿದ್ದ. ನಂಜುಂಡಯ್ಯನವರ
ಮನೆಯಲ್ಲಾದರೆ ಬಾಗಿಲ ಬಳಿ ಯಾವಾಗಲೂ ಅವನು ನಿಂತೇ ಇರಬೇಕು. ಇಲ್ಲಿ
ಹಾಗಲ್ಲ. ಯುವಕ ಹೊಸ 'ಮೇಸ್ಟ್ರು' ಒಮ್ಮೆಯೂ ಆವರೆಗೆ ಮುಖ ಗಂಟಿಕ್ಕಿರಲಿಲ್ಲ.
ಹೊರಬಂದ ಜಯದೇವನನ್ನು ಕಂಡು ಜವಾನ ಎದ್ದು ನಿಂತು, ಕೈಚೀಲ
ಗಳನ್ನೂ ಶೀಷೆಗಳನ್ನೂ ತಾನು ಪಡೆದ. ಬಾಗಿಲ ಬಳಿ ನಿಂತಿದ್ದ ಸುನಂದೆಯನ್ನೊಮ್ಮೆ
ತಿರುಗಿ ನೋಡಿ, ಜಯದೇವ ಬೀದಿಗಿಳಿದ.
ಹಾದಿ ನಡೆಯುತಿದ್ದಂತೆ ಜವಾನ ಹೇಳಿದ:
"ಸೋಮಿಯೋರ್‍ನ ಇದಕ್ಕಿಂದೇನೇ ನಾನು ನೋಡಿವ್ನಿ."
"ಹೌದೇನು? ನಿನ್ಹುಡುಗ ಶಾಲೆಗೆ ಬರ್‍ತಿದ್ನಾ?"
"ಊಂ."
"ಏನು ಹೆಸರು?"
"ಚಿಕ್ಕಣ್ಣ ಅಂತ"
ಜಯದೇವನಿಗೆ ನೆನಪಾಗಲಿಲ್ಲ. ಜ್ಞಾಪಿಸಿಕೊಳ್ಳುವುದು ಅನಗತ್ಯವೆಂದು
ಸೂಚಿಸುವಂತೆ ಜವಾನನೇ ಹೇಳಿದ:
“ಅವನು ಇಸ್ಕೂಲಿಗೋಗಿದ್ದು ಒಂದೇ ವರ್ಸ. ಆಮ್ಯಾಕೆ ಕಳ್ಮುಂಡೇ ಮಗ
ಓಡೋಗ್ಬುಟ್ಟ."
"ಈಗೆಲ್ಲಿದಾನೆ?"
"ಗೊತ್ತಿಲ್ಲ ಸೋಮಿ. ಎಲ್ಗೋದ್ನೊ..."