ಪುಟ:ನವೋದಯ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

380

ಸೇತುವೆ

ಆ ಆಳವಾದ ಕಣ್ಣುಗಳು ಬತ್ತಿಯೇ ಹೋಗಿದ್ದುವು. ಇನ್ನು ಆತ ಅಳುವುದು
ಸಾಧ್ಯವೇ ಇಲ್ಲವೇನೋ ಎಂಬಂತೆ. ಜಯದೇವ, ಮೊದಲ ಬಾರಿಗೆ ಕಾಣುವವನಂತೆ
ಸೂಕ್ಶ್ಮವಾಗಿ ಆತನನ್ನು ದಿಟ್ಟಿಸಿದ. ಎಷ್ಟು ವ್ಯಥೆಯನ್ನು ಮುಚ್ಚಿಟ್ಟುಕೊಂಡಿತ್ತೊ
ಆ ಹೃದಯ!
...ಜಯದೇವನಿನ್ನು ಆ ಊರಲ್ಲಿ ಯಾವುದಾದರೂ ಅಂಗಡಿಗೆ ಖಾಯ೦
ಗಿರಾಕಿ. ನಂಜುಂಡಯ್ಯನವರ ಅಣ್ಣನ ಅಂಗಡಿಯನ್ನೇ ಗೊತ್ತುಮಾಡುವುದು
ವಾಸಿಯೋ ಏನೋ.ಬೇರೆ ದೊಡ್ಡ ಅಂಗಡಿಯೊಂದೂ ಇರಲಿಲ್ಲ ಎಂದಲ್ಲ...
ಆದರೆ, ಆ ಬೀದಿಯಲ್ಲಿ ಮೊದಲು ಆತನ ಕಣ್ಣಿಗೆ ಬಿದ್ದುದು, ಜಯರಾಮ
ಶೆಟ್ಟರ ಅಂಗಡಿ. ಹಿಂದಿನ ನೆನಪುಗಳ ಸಿಹಿ ಕಹಿ ದೊರೆಯುವುದಕ್ಕೆ ಮುಂಚೆಯೆ,
ಗಲ್ಲದ ಮೇಲೆ ಕುಳಿತಿದ್ದ ನಾಗರಾಜನನ್ನು ಜಯದೇವ ಕಂಡ. ಆತನ ವಿದ್ಯಾರ್ಥಿಯೇ.
[ಬೆಲೆ ಕಡಮೆಯಾಗದೆ ಹೋದರೂ ಒಳ್ಳೆಯ ಸಾಮಾನಾದರೂ ಸಿಗಬಹುದು ತಾನೆ?]
ನಾಗರಾಜ;ತಾನು ಪಾಠ ಹೇಳಿಕೊಟ್ಟಿದ್ದ ದಿನಗಳು; ಉಚಿತವಾಗಿ ದೊರೆತಿದ್ದ
ಕೊಠಡಿ;ಆತನ ಅಕ್ಕ ಶ್ಯಾಮಲಾ...
ಜಯದೇವನನ್ನು ಗುರುತಿಸಿದ ನಾಗರಾಜ ಹೊರಕ್ಕೆ ನೆಗೆದು ಬಂದು ವಂದಿಸಿದ:
"ನಮಸ್ಕಾರ ಸಾರ್. ನಿನ್ನೆಯೇ ಬಂದಿರೀಂತ ಗೊತ್ತಾಯ್ತು ಸಾರ್. ನಮ್ಮ
ಮನೆಗೆ ಯಾಕ್ಸಾರ್ ಬರ್‍ಲಿಲ್ಲ?"
[ಚಿಕ್ಕವನು. ಇನ್ನೂ ಎರಡು ವರ್ಷ ಏಕವಚನ ಉಪಯೋಗಿಸಿದರೂ ತಪ್ಪಲ್ಲ.
ಅನಂತರ ಆತ ಪ್ರಸಿದ್ಧ ವ್ಯಾಪಾರಿ ನಾಗರಾಜಶೆಟ್ಟಿಯಾಗುವ. 'ಆರೋಗ್ಯವಾಗಿದೀರಾ
ಶೆಟ್ಟರೆ?' 'ಸಾಮಾನು ಕೊಡ್ತೀರೇನಪ್ಪಾ?']
"ದಿನವೆಲ್ಲ ಮನೆ ಏರ್ಪಾಟು ಮಾಡ್ತಾನೇ ಇದೀನಿ, ನಾಗರಾಜ. ಒಂದಿಷ್ಟು
ಸಾಮಾನು ಕೊಂಡುಕೊಳ್ಳೋಕೆ ಅಂತ್ಲೆ ಬಂದೆ."
"ಬನ್ನಿ ಸಾರ್, ಅದಕ್ಕೇನು?"
"ನಿಮ್ಮ ತಂದೆ ಆರೋಗ್ಯವಾಗಿದಾರಾ? ಮನೇಲಿー"
"ಎಲ್ಲರೂ ಆರೋಗ್ಯವಾಗಿದಾರೆ ಸಾರ್. ತಂದೆ ಊರಲ್ಲಿಲ್ಲ. ನಮ್ಮ ಅಕ್ಕನ್ನ
ಕರಕೊಂಡು ಹಾಸನಕ್ಕೆ ಹೋಗಿದಾರೆ ಸಾರ್. ['ಇನ್ನೂ ಹಳೇ ಕಥೆಯೇ.'] ನಮ್ಮಕ್ಕ
ಹೆರಿಗೆಗೆ ಬಂದಿದ್ಲು ಸಾರ್. ['ಸದ್ಯಃ!'] ಗಂಡುಮಗು ಸಾರ್."
"ಸಂತೋಷವಪ್ಪಾ."
"ಏನೇನು ಬೇಕ್ಸಾರ್ ಸಾಮಾನು? ಬನ್ನಿ, ಕೂತ್ಕೊಳ್ಳಿ ಸಾರ್."
ಸಾಬೂನು ತುಂಬಿ ಬಂದಿದ್ದ ಪೆಟ್ಟಿಗೆಯನ್ನೆ ಮಗುಚಿ ಹಾಕಿ ಆಸನ ಸಿದ್ಧಗೊಳಿ
ಸಿದ್ದರು. ಅದಕ್ಕೆ ಹೊಡೆದಿದ್ದ ಡಬ್ಬದ ಪಟ್ಟಿಯೊಂದು, ಪಕ್ಕದಿಂದ ಅಪಾಯಕಾರಿ
ಯಾಗಿ ಹೆಡೆ ಎತ್ತಿತ್ತು. ಪಾಯಜಾಮ ಅದಕ್ಕೆ ಆಹುತಿಯಾಗದಂತೆ ಎಚ್ಚರ ವಹಿಸುತ್ತ
ಜಯದೇವ, ಆ ಪೀಠದ ಮೇಲೆ ಕುಳಿತುಕೊಂಡ.