ಪುಟ:ನವೋದಯ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

381

ಪಟ್ಟಿಯನ್ನೋದಿದ ಬಳಿಕ, "ನೀಲಿ ಒಂದು ಮುಗಿದು ಹೋಗಿದೆ. ಪಕ್ಕದ
ಅಂಗಡಿಯಿಂದ ತರಿಸ್ಕೊಡ್ತೀನಿ ಸಾರ್", ಎ೦ದು ಹೇಳಿ ನಾಗರಾಜ, ಅಂಗಡಿಯ
ಆಳನ್ನು ಅಟ್ಟಿದ.
ಬೇರೆ ಗಿರಾಕಿಗಳು ಹೆಚ್ಚು ಜನ ಇರಲಿಲ್ಲವಾದರೂ ಎಲ್ಲ ಸಾಮಾನುಗಳನ್ನೂ
ಕಟ್ಟಲು ಅರ್ಧ ಘಂಟೆ ಹಿಡಿಯಿತು.
ಹದಿಮೂರು ರೂಪಾಯಿ ಆರಾಣೆ ಒಂಭತ್ತು ಕಾಸಿನ 'ಜುಮ್ಲಾ.'
ಜಯದೇವ ಹಣ ಹೊರತೆಗೆದಾಗ ನಾಗರಾಜನೆಂದ:
"ಪರವಾಗಿಲ್ಲ ಸಾರ್, ಲೆಕ್ಕ ಬರೆದಿಡೋಣ."
"ನಗದಿ ಇಂದು ಕಡ ನಾಳೆ_ಅಂತ ಬೋರ್ಡು ಹಾಕಿದೀಯಲ್ಲಯ್ಯ?"
"ಬೋರ್ಡಿಗೇನ್ಸಾರ್?"
"ಇರಲಿ, ತಗೋ. ಯಾವಾಗಲೂ ನಗದಿ ವ್ಯಾಪಾರವೇ ಮಾಡ್ಬೇಕೂಂತ
ತೀರ್ಮಾನಿಸ್ಬಿಟ್ಟಿದ್ದೀನಿ.”
ನಿರುಪಾಯನಾಗಿ ನಾಗರಾಜ ನೋಟುಗಳನ್ನು ಸ್ವೀಕರಿಸಿ, ಮರಳಿ ಕೊಡಬೇಕಾದ
ಚಿಲ್ಲರೆ ಹಣ ಎಣಿಸಿದ.
"ಸುಗಂಧ ಬತ್ತೀಂತ ಇದೊಂದು ಹೊಸ ಊದುಕಡ್ಡಿ ಬಂದಿದೆ. ಈ ಪ್ಯಾಕೆಟ್ಟು
ತಗೊಳ್ಳಿ ಸಾರ್."
ಗಲ್ಲದ ಮಗ್ಗುಲಿಂದ ಕಟ್ಟು ಹೊರಬಂತು.
"ಇದನ್ನೆ ಕೊಂಡ್ಕೋಬಹುದಾಗಿತ್ತಲ್ಲಯ್ಯ ಹಾಗಾದರೆ? ಎಷ್ಟಿದಕ್ಕೆ?"
"ಇದು ಮಾರಾಟದ್ದಲ್ಲ ಸಾರ್. ಸ್ಯಾಂಪಲ್ ಬಂದಿರೋದು. ಫ್ರೀ ತಗೊಳ್ಳಿ"
ಫ್ರೀ! [ಗುರುಕಾಣಿಕೆ!]
"ಸರಿಯಪ್ಪ."
"ಯಾವಾಗಲೂ ಚೀಟಿ ಕಳಿಸ್ಕೊಟ್ರೆ ಸಾಕು ಸಾರ್. ನಮ್ಮ ಆಳು ಸಾಮಾನು
ತಂದ್ಕೊಡ್ತಾನೆ."
"ಹೂಂ."
[ಎರಡು ವರ್ಷಗಳ ಹಿಂದೆಯಾಗಿದ್ದರೆ ಸ್ವತಃ ನಾಗರಾಜನೇ ಸಾಮಾನು
ತರುತ್ತಿದ್ದ.]
"ನಮ್ಮ ಮನೆಗೆ ಯಾವತ್ತು ಬರ್‍ತೀರಾ ಸಾರ್?"
"ಇನ್ನು ಇಲ್ಲೇ ಇರ್‍ತೀನಲ್ಲಪ್ಪ. ಯಾವಾಗಲಾದರೂ ಬಂದರಾಯ್ತು."
"ಎಲ್ಲಿ ಸಾರ್ ವಾಸ?"
"ಗುರುಸಿದ್ದಪ್ಪನವರ ಮನೆ ಗೊತ್ತಾ?"
"ಅವರ ಮನೇನಾ ಸಾರ್? ಗೊತ್ತು."
"ಬಾ ಒಂದ್ಸಾರೆ."