ಪುಟ:ನವೋದಯ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

383

"ನಾಳೆ ಬೆಳಗ್ಗೆ ಕೆಲಸಕ್ಕೆ ಹೋಗ್ತೀರಿ, ಅಲ್ವಾ?"
"ಹೂಂ."
"ನನಗೊಬ್ಬಳಿಗೇ ಇಲ್ಲಿ ಬೇಜಾರು."
"ಅಡುಗೆ ಮಾಡ್ತಾ ಇರುವಾಗ ನನ್ನ ನೆನಪಾದರೆ ತಾನೆ?"
"ಹೌದು. ನೆನಪಾಗೋದೇ ಇಲ್ಲ!"
"ಮಧಾಹ್ನ ಬಂದ್ಬಿಡ್ತೀನಲ್ಲಾ.”
"ಸಾಯಂಕಾಲ ಎಲ್ಲಿಗೂ ಹೋಗ್ಕೂಡದು."
"ಹೂಂ."
ಗೃಹಪ್ರವೇಶದ ಪರಿಶ್ರಮದಿಂದ ಆಗಲೆ ಆಯಾಸವಾಗಿದ್ದರೂ ಇಬ್ಬರಿಗೂ ನಿದ್ದೆ
ಬಂದಾಗ ನಡುವಿರುಳಾಗಿತ್ತು.



ಬೆಳಗ್ಗೆ ಬೇಗನೆ ನಂಜುಂಡಯ್ಯ ಜಯದೇವನ ಮನೆಗೆ ಬಂದರು. ಬಾಗಿಲಲ್ಲೆ
ನಿಂತು ಅವರೆಂದರು:
"ಹೋಗೋಣ್ವೇನ್ರಿ? ಪಾಠ ಶುರುವಾಗೋಕ್ಮುಂಚೆ ಉಪಾಧ್ಯಾಯರ ಸಭೆ
ಮಾಡೋಣ. ಲಕ್ಕಪ್ಪಗೌಡರು ನಿನ್ನೇನೆ ಕೇಳ್ತಾ ಇದ್ರು_ಹೊಸಬರು ಬಂದಿದಾ
ರಂತಲ್ಲಾ, ಎಲ್ಲಿದಾರೇಂತ."
"ಬಂದ್ಬಿಟ್ಟೆ. ಒಂದೇ ನಿಮಿಷ. ಕೂತ್ಕೊಳ್ಳಿ. ಕುರ್ಚಿ ಇಲ್ದೆ ತೊಂದರೇನೇ...
ಚಾಪೆ ಮೇಲೆ ಸರಿ ಹೋಗುತ್ತೋ ಇಲ್ವೋ", ಎಂದ ಜಯದೇವ, ಅತ್ತಿತ್ತ
ಓಡಾಡುತ್ತ.
"ಈ ಸೂಟಿಗೆ ಕುರ್ಚಿ ಬೇರೆ", ಎನ್ನುತ್ತ ನಂಜುಂಡಯ್ಯ ಚಾಪೆಯ ಮೇಲೆ
ಕುಳಿತರು, ಹ್ಯಾಟು ತೆಗೆದು ಪಕ್ಕದಲ್ಲೆ ಇರಿಸುತ್ತ.
ಒಳಗೆ, ಶರಟು ಪಾಯಜಾಮ ತೊಟ್ಟುಕೊಳ್ಳುತ್ತ ಜಯದೇವ ಕೇಳಿದ.
"ನೇರವಾಗಿ ಶಾಲೆಗೆ ಹೋಗದೆ ಬಳಸಿಕೊಂಡು ಬಂದ್ರಲ್ಲಾ ಸಾರ್."
"ನಿಮ್ಮನ್ನೂ ಕರಕೊಂಡೇ ಹೋಗೋಣ ಅನಿಸ್ತು, ಬಂದ್ನೆಪ್ಪ."
"ಒಳ್ಲೇದಾಯ್ತೂಂತಿಟ್ಕೊಳ್ಳಿ."
ಸುನಂದಾ ಎರಡು ಲೋಟಗಳಲ್ಲಿ ಕಾಫಿ ತಂದಳು. ಆಕೆ, ತನ್ನ ಪಾಲಿನದನ್ನೂ
ಕೊಡುತ್ತಿರಬೇಕೆಂದು ಊಹಿಸಿ ನಂಜುಂಡಯ್ಯ ನಿರಾಕರಿಸಿದರು.
"ನನಗ್ಬೇಡಿ. ಈಗ್ತಾನೇ ಆಯ್ತು."