ಪುಟ:ನವೋದಯ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

391

"ಇಲ್ಲಿ ನನ್ನ ಹಳೇ ಸ್ನೇಹಿತರು ಯಾರೂ ಇಲ್ವೇನು?"
ಒಂದು ಮೂಲೆಯಲ್ಲಿ ಗುಜುಗುಜು ಸದ್ದಾಯಿತು. ಹುಡುಗರು ಒಬ್ಬನನ್ನು
ಎತ್ತಿಹಿಡಿದು ನಿಲ್ಲಿಸಿದರು.
"ಶೇಷಪ್ಪ ಸಾರ್."
ಜಯದೇವನಿಗೆ ನೆನಪಾಯಿತು.
"ಶೇಷಪ್ಪ ಕೆ."
ಬೇರೊಂದೆಡೆ ಹುಡುಗರು ಇನ್ನೊಬ್ಬನನ್ನು ಹಿಡಿದು ನಿಲ್ಲಿಸಿದರು.
"ಲಕ್ಷ್ಮೀಕಾಂತಂ ಸಾರ್."
ಆ ಮುಖವೂ ಅಪರಿಚಿತವಾಗಿರಲಿಲ್ಲ.
ಜಯದೇವ ಕೇಳಿದ:
"ನಾನು ಬಂದ್ಮೇಲೆ ಪಾಸಾಗೋಣಾಂತ ಕಾದಿದ್ದಿರೇನ್ರೋ?"
ಆ ಹುಡುಗರಿಬ್ಬರೂ ನಾಚಿದರು, ನಕ್ಕರು. ಆದರೆ ಉಳಿದ ಹಲವರು ಉತ್ತರ
ವಿತ್ತರು:
“ಹೂಂ ಸಾರ್."
"ಸರಿ, ಕೂತ್ಕೊಳ್ಳಿ."
ಎಲ್ಲರಿಗೋಸ್ಕರ ಬೀರಿದ ಒಂದು ಮುಗುಳು ನಗು. ಯಾವ ತೊಂದರೆಯೂ
ಇರಲಿಲ್ಲ. ಅವರೆಲ್ಲ ಆತನ ಹುಡುಗರೇ. ಅಂಥವರಿಗೆ ಪಾಠ ಹೇಳುವುದು ಹುಡು
ಗಾಟವಿದ್ದ ಹಾಗೆ. ಹಾಜರಿ ಪುಸ್ತಕ. ಹಲವು ಹೆಸರುಗಳು.
"ನಾಳೆಯಿಂದ ನಿಮಗೆ ಇತಿಹಾಸ ಹೇಳೋನು ನಾನು."
ಹುಡುಗರಿಗೆ ಗೊತ್ತಾಗಲಿಲ್ಲ. ಒಬ್ಬನೆಂದ:
"ಇವತ್ತು ಸಾರ್?"
[ತರಗತಿಯ ಹಿರೇಮಣಿ ಯಾರೆಂದು ಕೇಳಿಯೇ ಇರಲಿಲ್ಲ ಜಯದೇವ. ಹಾಗೆ
ಪ್ರಶ್ನಿಸಿದ ಹುಡುಗನೇ ಇರಬೇಕೆಂದು ಆತನನ್ನು ಗುರುತಿಟ್ಟುಕೊಂಡ.]
"ಇವತ್ತು ನೀವು ಇತಿಹಾಸ ಹೇಳ್ಬೇಕು. ಈವರೆಗೆ ಏನೇನಾಯ್ತೂಂತ ನನಗೆ
ತಿಳಿಸ್ಬೇಕು."
ಯಾರೂ 'ಆಗಲಿ' ಎನ್ನಲೂ ಇಲ್ಲ: 'ಬೇಡ'ವೆನ್ನಲೂ ಇಲ್ಲ. ಕೆಲವರು
ಪುಸ್ತಕಗಳನ್ನು ತೆರೆದರು: ಕೆಲವರು ಮುಚ್ಚಿದರು.
ಬಳಿಕ, ಒಬ್ಬ ಹುಡುಗನ ಪುಸ್ತಕವನ್ನು ಕೈಗೆತ್ತಿಕೊಂಡು, ಒಂದೊಂದಾಗಿ ಜಯ
ದೇವ ಪ್ರಶ್ನೆ ಕೇಳಿದ. ಉತ್ತರವಾಗಿ ಹುಡುಗರು-ತಿಳಿದವರು-ಇತಿಹಾಸದ ಕಥೆ
ಹೇಳಿದರು. ತಿಳಿಯದವರೂ ಇದ್ದರು. ಅವರನ್ನು ಜಯದೇವ ಅಪಹಾಸ್ಯಕ್ಕೆ
ಗುರಿಮಾಡಲಿಲ್ಲ; ಅವರ ಮೇಲೆ ಮುನಿಯಲಿಲ್ಲ.