ಪುಟ:ನವೋದಯ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

394

ಸೇತುವೆ

"ಬನ್ನಿ ಲಕ್ಕಪ್ಪಗೌಡರೇ, ಒಳಗ್ಬನ್ನಿ."
ಅಷ್ಟರಲ್ಲೆ ಸುನಂದಾ ಹಾಸಿಗೆ ಮಡಚಿಟ್ಟು ಬಂದಳು.
ಆಗ ಜಯದೇವನೆಂದ:
"ಇವರು ಯಜಮಾನಿತಿ ಸುನಂದಾ.......ಇವರು ನಮ್ಮ ಶಾಲೇಲಿ ಉಪಾ
ಧ್ಯಾಯರು."
ವಂದನೆಗಳು.
"ಬನ್ನಿ, ಕೊಠಡಿಗೆ ಹೋಗೋಣ,"ಎಂದು ಜಯದೇವ ಲಕ್ಕಪ್ಪಗೌಡರನ್ನು
ಕರೆದೊಯ್ದು, ಚಾಪೆ ಬಿಡಿಸಿದ.
ಅದೇ ಪಂಚೆ, ಜುಬ್ಬ, ಕೋಟು. ಶುಭ್ರವಾಗಿದ್ದುವು. ಸುತ್ತಲೂ ದೃಷ್ಟಿ
ಬೀರುತ್ತ, ಚಾಪೆಯ ಮೇಲೆ ಕುಳಿತು, ಗೌಡರೆಂದರು:
"ಮನೆ ಅನುಕೂಲವಾಗಿದೆಯೆ?"
"ಇದೆ ತಕ್ಕಮಟ್ಟಿಗೆ. ಪರವಾಗಿಲ್ಲ."
ಅನಂತರ, ಬಾಡಿಗೆ ಎಷ್ಟೆಂಬ ಪ್ರಶ್ನೆ.
ಒಂದೆರಡು ನಿಮಿಷ ಹಾಗೆ ಕಳೆದ ಬಳಿಕ ಜಯದೇವ ಕೇಳಿದ:
"ಬೆಳಗ್ಗೇನೇ ಬಂದ್ರಲ್ಲಾ. ಏನ್ಸಮಾಚಾರ?"
"ಹೀಗೇ ಮಾತಾಡಿಸ್ಕೊಂಡು ಹೋಗೋಣ ಅಂತ ಬಂದೆ. ಶಾಲೇಲಂತೂ ಪುರ
ಸೊತ್ತೇ ಇರೋದಿಲ್ಲ."
"ನೀವು ಬಂದದ್ದು ಒಳ್ಳೇದೇ ಆಯ್ತು. ಊಟ ಆಗೋವರೆಗೂ ಹ್ಯಾಗೆ
ಹೊತ್ತು ಕಳೆಯೋಣಾಂತ ನಾನೂ ಯೋಚಿಸ್ತಾನೇ ಇದ್ದೆ."
[ಸುಳ್ಳು. ಉಪಚಾರಕ್ಕೆಂದು ಹೇಳಿದ ಮಾತು.]
“ಈಗ ಬೇರೆ ಯಾರೂ ಇಲ್ಲಿಗೆ ಬರೋದಿಲ್ಲ ತಾನೆ?"
“ನನಗೆ ಗೊತ್ತಿರೋ ಮಟ್ಟಿಗೆ ಯಾರೂ ಬರಲಾರರು."
ಜಯದೇವ ನಿರುತ್ಸಾಹಿಯಾದ. ಮುಂದಿನ ಮಾತುಕತೆಯ ವಿಷಯ ಏನಿದ್ದೀ
ತೆಂದು ಊಹಿಸುವುದು ಕಷ್ಟವಾಗಿರಲಿಲ್ಲ. ವಿದ್ಯಾಕ್ಷೇತ್ರದೊಳಗಿನ ರಾಜಕೀಯದ
ಮಾತು. ಅವರ ಮೇಲೆ ಇವರ ದೂರು.
ಲಕ್ಕಪ್ಪಗೌಡರೆಂದರು:
"ನೀವು ಮೊದಲು ಇಲ್ಲೇ ಇದ್ರಂತೆ."
“ಹೌದು.”
“ಆಗ ನಾನು ನಾಯಕನಹಳ್ಳೀಲಿದ್ದೆ......ಈ ವರ್ಷ ಟ್ರೇನಿಂಗಿಗೆ ಹೋಗ್ಬೇ
ಕೂಂತಲೂ ನನಗೆ ಯೋಚನೆ ಇತ್ತು. ಆದರೆ ಮನೇಲಿ ಹೆಂಡತಿ ಕಾಹಿಲೆ ಮಲಗಿ
ತೊಂದರೆಯಾಯ್ತು."
“ಹೌದೆ? ಏನಾಗಿತ್ತು?"