ಪುಟ:ನವೋದಯ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

397

"ನಾನು ಹಣ ಸಂಪಾದನೆಗೋಸ್ಕರ ಈ ವೃತ್ತಿಗೆ ಇಳೀಲಿಲ್ಲ ಗೌಡರೆ."
"ನೀವು ಹೇಳೋದು ನೋಡಿದ್ರೆ, ನಾವೆಲ್ಲ ಇಷ್ಟರಲ್ಲೇ ಸಾವಿರಾರು ರೂಪಾಯಿ
ಆಸ್ತಿ ಮಾಡಿರ್‍ಬೇಕು. ಅಲ್ವೆ?"
ಮಾತಿನ ಕಠೋರತೆ ಕಡಮೆಯಾಗಲೆಂದು ಗೌಡರು ಅದರೊಡನೆ ನಗೆಯನ್ನೂ
ಬೆರೆಸಿದರು.
"ಉಪಾಧ್ಯಾಯರ ವೃತ್ತೀಲಿ ಯಾರೂ ಆಸ್ತಿ ಮಾಡೋದಿಲ್ಲಾಂತಿಟ್ಕೊಳ್ಳಿ."
"ಹೌದಾ? ಹಿಂದೆ ಬಂದಾಗ ನೀವು ಒಬ್ರೇ ಇದ್ರಂತೆ. ಈಗ ಹಾಗಲ್ವಲ್ವಾ!"
ದೋಸೆ ಹುಯ್ದ ಸದ್ದಾಯಿತು ಒಳಗೆ. ಆ ಸುವಾಸನೆ ಕೊಠಡಿಯೊಳಕ್ಕೂ
ಬಂತು.
"ಮನುಷ್ಯ ಬದುಕೋದಕ್ಕೆ ಹಣ ಬೇಕೇ ಬೇಕು.ಆದರೆ ಹಣ ಸಂಪಾದನೆ
ಯೊಂದೇ ಗುರಿಯಾಗಿರುವ ಜನಕ್ಕೆ ಹೇಳಿಸಿದ್ದಲ್ಲ ಉಪಾಧ್ಯಾಯ ವೃತ್ತಿ," ಎಂದ
ಜಯದೇವ.
"ಸರಿ ಸಾರ್. ನಾಳೆ ಹೈಸ್ಕೂಲು ಸ್ಥಾಪನೆಯಾಯ್ತೂಂತ್ಲೇ ಇಟ್ಕೊಳ್ಳೋಣ.
ಆಗ ಅಲ್ಲಿ ನೀವು ಬಿಟ್ಟಿ ದುಡೀತೀರೊ?"
"ಬಿಟ್ಟಿ ಯಾಕೆ ದುಡೀಲಿ?"
"ನಾನ್ಹೇಳ್ತೀನಿ ಕೇಳಿ. ಇನ್ನು ಒಂದು ವರ್ಷದೊಳಗೆ ಹೈಸ್ಕೂಲು ಆಗಿಯೇ
ಆಗ್ತದೆ. ನಿಮ್ಮನ್ನ ತಗೊಂಡೇ ತಗೋತಾರೆ. ನಿಮ್ಮಂಥ ಸಾಧು ಸ್ವಭಾವದವರು_"
[ಸಾಧು ಸ್ವಭಾವ? ತಾನು?]
"ನಾನೇನು ಎಳೇ ಮಗು ಅಂತ ತಿಳಕೊಂಡಿದೀರಾ?"
[ಮುದ್ದಿಸಿ ಕೆಟ್ಟಿರೋ ಮಗು, ಎಂದಿದ್ದಳು ಸುನಂದಾ! ಪಡಬಾರದ ಕಷ್ಟಪಟ್ಟು,
ಬಾಲ್ಯ ಕಳೆದು, ಶಿಕ್ಷಣ ಮುಗಿಸಿ, ಬದುಕಿಗೊಂದು ಗುರಿಯನ್ನು ಕಂಡುಕೊಳ್ಳೋದಕ್ಕೆ
ತಾನು ಪ್ರಯತ್ನಿಸ್ತಾ ಇದ್ದರೆ-]
"ದಯವಿಟ್ಟು ಹಾಗೆ ತಪ್ಪು ತಿಳ್ಕೋಬೇಡಿ. ಈ ಪ್ರಪಂಚದಲ್ಲಿ ನಿಮ್ಮ ಹಾಗೆ
ಸಾತ್ವಿಕರು ಇನ್ನೂ ಇದಾರೆ. ಪ್ರಪಂಚ ಉಳಿದಿರೋದೂ ಅವರಿಂದಲೇ. ಆದರೆ
ಸ್ವಾರ್ಥಿಗಳು ಯಾವಾಗಲೂ ತಮ್ಮ ಕೆಲಸ ಸಾಧಿಸೋಕೆ ಅಂಥವರ್‍ನೇ ಹುಡುಕ್ತಾರೆ."
"ಈ ಊರಿಗೆ ಹೈಸ್ಕೂಲು ಬೇಡ ಅಂತಲೊ ನೀವು ಹೇಳೋದು?"
"ಬೇಡ ಅಂದ್ನೆ ನಾನು? ಆದರೆ ಹೈಸ್ಕೂಲು, ಒಂದು ಕೋಮಿನವರ ಸ್ವತ್ತಾಗ
ಬಾರದೂಂತ ನನ್ನ ಅಭಿಪ್ರಾಯ."
"ಅದು ಸರಿ ಅನ್ನಿ. ಇಲ್ಲಿ ಹಾಗೆ ಆಗೋದಕ್ಕೆ ಅವಕಾಶ ಎಲ್ಲಿದೆ? ಸಮಿತೀಲಿ
ಎಲ್ಲರಿಗೂ ಪ್ರಾತಿನಿಧ್ಯ ಇಲ್ವೇನು?"
[ಇದೆ ಎನ್ನುವುದು ಜಯದೇವನಿಗೆ ಮೊದಲೇ ಗೊತ್ತಿತ್ತು. ನಂಜುಂಡಯ್ಯ
ಆ ವಿಷಯ ಹೇಳಿಯೂ ಇದ್ದರು.]