ಪುಟ:ನವೋದಯ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

399

ಕಾಫಿಯ ಲೋಟಗಳೂ ಬ೦ದುವು.
ಕಾಫಿ ತಿಂಡಿಯ ನೆಪದಿಂದಲಾದರೂ ವಿಷಯ ಬದಲಾಗಲೆಂದು ಜಯದೇವ
ಕೇಳಿದ:
“ಬೆಳಗ್ಗೆ ಯಾವಾಗಲೂ ಉಪಾಹಾರ ಮುಗಿಸ್ಕೊಂಡೇ ಶಾಲೆಗೆ ಬರ್‍ತೀರೀಂತ
ಕಾಣುತ್ತೆ."
"ಹೌದು. ಶಾಲಾ ಸಮಯ ಬದಲಾಯಿಸ್ಬಿಟ್ಟಿದಾರಲ್ಲ."
"ದೂರದಿಂದ ಬರೋ ಹುಡುಗರಿಗೆ ಬಹಳ ಕಷ್ಟ, ಅಲ್ವ?"
"ಈಗೇನೋ ಬರ್ತಾರೆ. ಆದರೆ ಮಳೆಗಾಲದಲ್ಲಿ ಸಾಧ್ಯವೇ ಇಲ್ಲ. ಮೊನ್ನೆ
ಇನ್ಸ್ ಪೆಕ್ಟರು ಬಂದಿದ್ದಾಗ ಸ್ಪಷ್ಟವಾಗಿ ಹೇಳ್ದೆ-ಇಂಥ ಸುಧಾರಣೆಯಿಂದ ಪ್ರಯೋಜನ
ವಾಗೋದಿಲ್ಲಾಂತ. ಅವರು ನಮ್ಮ ಗುರುತಿನವರೂಂತಿಟ್ಕೊಳ್ಳಿ. ಬಹುಶಃ ಸಮಯ
ಗೊತ್ತುಮಾಡೋದನ್ನೆಲ್ಲ ಆಯಾ ಊರಿನ ಉಪಾಧ್ಯಾಯರಿಗೆ ಬಿಡಬಹುದು.
ಹಾಗೇ೦ತ ಅವರಂದರು."
"ನಮ್ಮಲ್ಲಿ ಹನ್ನೊಂದು ಘಂಟೆಯ ಹೊತ್ತಿಗೆ ಶುರು ಮಾಡಿದ್ರೆ ಸಾಯಂಕಾಲ
ಆಟ ಪಂದ್ಯಾಟಕ್ಕೆ ಅನುಕೂಲವಾದೀತು."
"ನೋಡೋಣ. ಅದೇನು ದೊಡ್ಡ ವಿಷಯ?"
ಉಸಿರು ಕಟ್ಟಿಸುವಂತಹ ಸಂಭಾಷಣೆಯಿಂದ ದೂರ ಸರಿದ ಹಾಗಾಯಿತೆಂದು
ಸರಾಗವಾಗಿ ಉಸಿರಾಡುತ್ತ ಜಯದೇವನೆಂದ:
"ನಮ್ಮ ಶಾಲೆಗೆ ಇನ್ನೂ ಒಬ್ಬರು ಬಂದ್ಬಿಟ್ರೆ ಹೆಚ್ಚು ಅನುಕೂಲವಾಗುತ್ತೆ."
"ನಿಜ."
"ಸಾಕಷ್ಟು ಜನ ಉಪಾಧ್ಯಾಯರು ಇಲ್ದೇ ಹೋದ್ರೆ ಹುಡುಗರ ವಿಷಯ
ವ್ಯೆಯಕ್ತಿಕವಾಗಿ ಗಮನ ಕೊಡೋದಕ್ಕೆ ಆಗೊಲ್ಲ. ವಿದ್ಯಾರ್ಥಿಗಳ ಸಂಖ್ಯೆಯೋ,
ಹೆಚ್ತಾನೇ ಇದೆ."
ಲಕ್ಕಪ್ಪಗೌಡರು ನಕ್ಕರು.
ಯಾಕೆ ಎನ್ನುವ ಮೌನದ ಪ್ರಶ್ನೆಯನ್ನು ಮುಖಭಾವದಿಂದಲೆ ಸೂಚಿಸುತ್ತ,
ಜಯದೇವ ಅವರನ್ನು ನೋಡಿದ.
"ನಾನು, ಕೆಲವು ವರ್ಷಗಳ ಹಿಂದೆ ಈ ವಿಷಯವೆಲ್ಲ ಯೋಚಿಸ್ತಿದ್ದೆ. ಈಗ,
ನೀವು ತಲೆಕೆಡಿಸ್ಕೊಳ್ತಾ ಇದ್ದೀರಿ. ವರ್ಷಗಳು ಉರುಳ್ತವೆ. ವ್ಯಕ್ತಿಗಳು ಬದಲಾಗ್ತಾರೆ.
ಆದರೆ ಸಮಸ್ಯೆಗಳು ಮಾತ್ರ ಹಾಗೇ ಇರ್ತ್ತ‍ವೆ!"
ಬೇರೊಂದು ಸಂದರ್ಭದಲ್ಲಿ ಹಿಂದೆ ರಂಗರಾಯರೂ ಹೆಚ್ಚು ಕಡಮೆ ಅಂತಹದೇ
ಮಾತನ್ನಾಡಿದ್ದರು. ಆದರೆ ಆ ಧ್ವನಿಯಲ್ಲಿ ಕಾತರವಿತ್ತು,-ವ್ಯಂಗ್ಯವಿರಲಿಲ್ಲ.
"ಆಗಲಿ ಲಕ್ಕಪ್ಪ್ ಗೌಡರೇ. ಪುನಃ ಪುನಃ ಜಗ್ಗೋದರಲ್ಲಿ ತಪ್ಪಿಲ್ಲವಲ್ಲ. ಸಾವಿರ
ಜನ ಸೇರಿದಾಗ ಬಂಡೆ ಮಿಸುಕಿದರೂ ಮಿಸುಕಬಹುದು. ಯಾರಿಗೆ ಗೊತ್ತು? ಕಾಲ