ಪುಟ:ನವೋದಯ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

400

ಸೇತುವೆ

ಯಾವಾಗಲೂ ಹೀಗೆಯೇ ಇರೋದು ಸಾಧ್ಯವೆ?"
ಗೌಡರು ನೀರಿನ ಲೋಟದೊಡನೆ ಏಳಲೆತ್ನಿಸುತ್ತಿದ್ದುದನ್ನು ಕಂಡು ಜಯ
ದೇವನೆಂದ:
"ತಟ್ಟೇಲೆ ತೊಳ್ಕೊಳ್ಳಿ."
ಕೈ ತೊಳೆದು ಸಣ್ಣನೆ ತೇಗಿ ಗೌಡರೆಂದರು:
"ನಿಮ್ಮಂಥ ಆದರ್ಶ ಸಾಧಕರನ್ನು ಕಂಡರೆ ಗೌರವ ಹುಟ್ಟುತ್ತಪ್ಪ.”
ಜಯದೇವ ಉತ್ತರಕೊಡದೆ, ಬರಿದಾಗಿದ್ದ ತಟ್ಟೆ ಲೋಟಗಳನ್ನೆತ್ತಿಕೂಂಡು
ಒಳಹೋದ.
...ಗೌಡರು ಅಡಿಕೆ ಬೇಡವೆಂದರು. ಬೀಡಿ, ಸಿಗರೇಟು, ನಶ್ಯಗಳ ಅಗತ್ಯವೂ
ಅವರಿಗೆ ಇರಲಿಲ್ಲ.
"ಅದೇ, ಮೊನ್ನೆಯಿಂದ ನೋಡ್ತಿದೀನಿ. ಯಾವ ಚಟವೂ ನಿಮಗೆ ಇರೋ
ಹಾಗೆ ಕಾಣಲಿಲ್ಲ!" ಎಂದ ಜಯದೇವ, ಗೌಡರ ವಿಷಯದಲ್ಲಿ ಮೆಚ್ಚುಗೆ ಸೂಚಿಸುವ
ಆ ಅವಕಾಶಕ್ಕಾಗಿ ಸಮಾಧಾನಪಡುತ್ತ.
"ಹಿಂದೆ ಸೇದ್ತಿದ್ದೆ. ನಂಬ್ತೀರೋ ಇಲ್ಲವೋ, ತಿಂಗಳಿಗೆ ಮೂವತ್ತು ರುಪಾಯಿ
ಅದಕ್ಕೇ ಖರ್ಚಾಗ್ತಿತ್ತು. ಸಂಬಳ ಸಾಲದೆ ಮನೆಯಿಂದ ತರಿಸ್ತಿದ್ದೆ. ಆಮೇಲೆ
ಪ್ಲೂರೆಸೀಂತ ಒಂದಾಯ್ತು ನೋಡಿ. ಅದಕ್ಕೆ ಚಿಕಿತ್ಸೆ ಮಾಡಿಸಿಕೊಂಡೋನು ಸೇದೋದು
ಬಿಟ್ಟೇ ಬಿಟ್ಟೆ," ಎಂದು ಗೌಡರು ವಿವರಣೆ ಇತ್ತರು.
"ನಂಜುಂಡಯ್ಯನವರು ಮಾತ್ರ ಬಹಳ ಸೇದ್ತಾರೆ."
"ಅವರದೇನು ಬಿಡಿ!"
ಈ ಮಾತುಕತೆ ಮುಗಿಯುವುದೇ ಇಲ್ಲವೇನೋ ಎಂದು ಅಸಹನೆಯಿಂದ ಕುದಿ
ಯುತ್ತಿದ್ದ ಸುನಂದಾ, ತಟ್ಟೆ ಲೋಟಗಳೊಡನೆ ಜಯದೇವ ಒಳ ಬಂದಾಗಲೆ ಗೊಣ
ಗಿದ್ದಳು. ಈಗ ಸ್ವತಃ ತಾನೇ ಒಳ ಹಜಾರದ ವರೆಗೂ ನಡೆದು, ಸ್ವರವನ್ನು ಆದಷ್ಟು
ಇಂಪಾಗಿಡಲು ಯತ್ನಿಸುತ್ತ, ಹೇಳಿದಳು:
"ನೀರು ಕಾದಿದೆ. ಸ್ನಾನ ಈಗ್ಮಾಡ್ತೀರೋ? ಆಮೇಲೆ ಮಾಡ್ತಿರೊ?"
ಆ ಮಾತು ಕೇಳಿಸಿದೊಡನೆ ಗೌಡರೆಂದರು:
"ಇನ್ನು ನಾನು ಹೊರಡ್ತೀನಿ. ಪೇಟೆಕಡೆಗೂ ಸ್ವಲ್ಪ ಹೋಗ್ಬೇಕು. ನಾಳೆ
ಹ್ಯಾಗೂ ಸಿಕ್ಕಿಯೇ ಸಿಗ್ತೀವಲ್ಲ"
ಅವರು ಏಳುತ್ತಿದ್ದಂತೆ ಜಯದೇವನೆಂದ:
"ಊಟ ಇಲ್ಲಿಯೇ ಮುಗಿಸ್ಕೊಂಡು ಹೋಗ್ಬಹುದಾಗಿತ್ತಲ್ಲ."
"ಏನೂ ಬೇಡಿ, ಊಟದಷ್ಟೇ ಭರ್ಜರಿಯಾಗಿತ್ತು ತಿಂಡಿ. ಬರೋ ಭಾನುವಾರ
ಮಾತ್ರ__"
“ಆಗಲಿ. ನೆನಪಿದೆ."