ಪುಟ:ನವೋದಯ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

403

"ಲಿಂಗಾಯತರ ಮನೆಯಲ್ಲೂ ಊಟವಾಯ್ತು. ಒಕ್ಕಲಿಗರ ಮನೆಯಲ್ಲೂ
ಊಟವಾಯ್ತು. ಇನ್ನು ನಮ್ಮದೇ ಅಂತ ಜಾತಿ ಯಾವುದಾದರೂ ಒಂದು ಉಳಿದಿದೆ
ಯೇನು?"
ಆಕೆ ನಗುತ್ತಲೇ ಹಾಗೆ ಆಡಿದ್ದರೂ ಜಯದೇವನಿಗೆ ಸ್ವಲ್ಪ ಕಸಿವಿಸಿ ಎನಿಸಿತು.
“ಸುನಂದಾ, ಯಾಕೆ ಹಾಗಂತೀಯೆ?"
"ಇನ್ನೇನು ಮತ್ತೆ?"
“ನಾವು ಯಾವ ಜಾತಿ ಹೇಳು."
"ಹೇಳ್ಕೊಟ್ಟಿದೀರಲ್ಲ ಆವತ್ತೆ-ಮನುಷ್ಯಜಾತೀಂತ."
ಬಿರುಸಾದ ಧ್ವನಿ. ಆದರೂ ಅಸಮ್ಮತಿಯ ಛಾಯೆ ಇರಲಿಲ್ಲ.
"ಹೀಗಾಯ್ತೂಂತ ಬೇಸರವೆ ನಿನಗೆ?"
"ನಾನು ಯಾವತ್ತೂ ಹಾಗೆ ಹೇಳಿಲ್ವಲ್ಲ."
"ಬಂಗಾರ, ಒಳ್ಳೆಯವಳು."
"ತಾಳಿ, ಈ ಸಲ ಅಮ್ಮನಿಗೆ ಬರೆಯುವಾಗ ಈ ವರೆಗೆ ಎಲ್ಲೆಲ್ಲಿ ಊಟ ಮಾಡಿ
ದೀವಿ ಅಂತ ವರದಿ ಕೊಡ್ತೀನಿ."
“ಅದೊಂದು ಮಾಡ್ಬೇಡ ಸದ್ಯಃ!"
“ಯಾಕೆ?"
"ಸುಮ್ಸುಮ್ನೆ ವಯಸ್ಸಾದವರ ಮನಸ್ಸು ನೋಯಿಸ್ಬಾರದು."
"ಆಗಲಿ. ನಿಮ್ಮದೇ ರಾಜ್ಯ, ನಿಮ್ಮದೇ ಶಾಸನ."
ಬಂಡಾಯಗಾರಳಾಗಿ ಹೆಂಡತಿ ಹಾಗೆ ಮಾತನಾಡಿದಳೆಂದು ಜಯದೇವ ತಕ್ಕ
ಶಿಕ್ಷೆ ವಿಧಿಸಿದ.
ಸತ್ಕಾರಕೂಟಗಳು ಅಷ್ಟಕ್ಕೆ ಮುಗಿದುವೆಂದೆ? ಶಂಕರಪ್ಪ ತಮ್ಮ ಮನೆಗೆ ಚಹಾಕ್ಕೆ
ಕರೆದರು. ಆ ಊರಿನಲ್ಲೆಲ್ಲ ಸುಶಿಕ್ಷಿತೆಯಾದ ಪತ್ನಿ ಸುನಂದಾ ಒಬ್ಬಳೇ. ಜತೆಗೂಡಿ
ಜಯದೇವ ಬೀದಿಗಿಳಿಯುವುದು ಜನರ ಪಾಲಿಗೊಂದು ರಮ್ಯನೋಟವಾಗಿತ್ತು.
ಶಂಕರಪ್ಪನವರ ಮನೆಗೆ ಹೊರಟ ದಿನ ಮಾತ್ರ ಜಟಕಾ ಗಾಡಿಯೇ ಜಯ
ದೇವನ ಮನೆ ಬಾಗಿಲಿಗೆ ಬಂತು. ಪಂಚಾಯತ ಬೋರ್ಡು ಅಧ್ಯಕ್ಷರೇ ಅದನ್ನು
ಕೊಟ್ಟು ಕಳುಹಿದ್ದರು. ಆ ಊರಿನ ಏಕ ಮಾತ್ರ ವಾಹನ. ಕತ್ತೆಯಂತಹ ಕುದುರೆ;
ಎತ್ತಿನ ಬಂಡಿಯಂತಹ ಗಾಡಿ. ಅದು ಹೊರಟಾಗಲಂತೂ ಬೀದಿಯುದ್ದಕ್ಕೂ ನಾಯಿ
ಗಳು ಅಟ್ಟಿಸಿಕೊಂಡು ಬರುತ್ತಿದ್ದುವು. ಆ ಗಾಡಿಯ ಒಳಗಿರುವವರು ಯಾರೆಂದು
ನೋಡುವ ಕುತೂಹಲ ಎಲ್ಲರಿಗೂ.
ಶಂಕರಪ್ಪನವರೇ ಹೇಳಿದಂತೆ, ಅವರು ಏರ್ಪಡಿಸಿದ್ದು ಸಾರ್ವಜನಿಕ ಸ್ವರೂಪ
ವಿದ್ದ ಸತ್ಕಾರ ಕೂಟ. ಬೋರ್ಡಿನ ಇಬ್ಬರು ಸದಸ್ಯರಿದ್ದರು; ನಂಜುಂಡಯ್ಯನಿದ್ದರು;
ಪೋಲೀಸ್ ಅಧಿಕಾರಿಯಿದ್ದರು; ಬೇರೆಯೂ ಒಬ್ಬಿಬ್ಬರು. ಆನಂದವಿಲಸದ ಸರಬ