ಪುಟ:ನವೋದಯ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

406

ಸೇತುವೆ

"ಹೂ೦ ಸಾರ್."
ಹಿಂದೆ, ತನ್ನ ಮನಸ್ಸು ಒಂದು ಕ್ಷಣ ಓಲಾಡುವಂತೆ ಮಾಡಿದ್ದ ಹುಡುಗಿ
ಇ೦ದಿರಾ. ಒಳ್ಳೆಯ ಹುಡುಗಿ.
“ಇಂದಿರಾ ಏನ್ಮಾಡ್ತಿದಾಳೆ ಈಗ?"
"ಮನೇಲೆ ಇದ್ದು ಕಸೂತಿ ಹಾಕೋದು ಕಲೀತಿದಾಳೆ ಸಾರ್."
“ನಿಮ್ಮನೆ ಅವರ ಮನೆಗೆ ಸಮೀಪಾನಾ?"
"ಬಹಳ ಸಮೀಪ ಸಾರ್. ನಾಲ್ಕು ಮನೆ ದಾಟಿದರಾಯ್ತು."
“ಆಗಲಮ್ಮ. ಇನ್ನು ಹೋಗು."
“ಯಾವಾಗ ಬರ್‍ತೀರೀಂತ ಹೇಳ್ಲಿ ಸಾರ್?"
"ನಾಳೆ ತಿಳಿಸ್ತೀನಿ, ಚೂಡಾ."
ಸಂಜೆ ಜಯದೇವ, ಮನೆಯಲ್ಲಿ ಸುನಂದೆಯ ಎದುರು ಆ ಪ್ರಸ್ತಾಪವೆತ್ತಿದ.
"ಇಂದಿರಾ ಗೊತ್ತಲ್ವೇನೆ ನಿಂಗೆ?"
[ಹೆಸರು ಮರೆಯುವುದು ಸಾಧ್ಯವಿದ್ದರೆ!]
"ನಿಮ್ಹುಡುಗಿ!"
“ಅವಳ ತರಗತೀಲೆ ಪ್ರಭಾಮಣೀಂತ ಒಬ್ಬಳು ಹುಡುಗಿ ಇದ್ಲು. ಅವಳ ತಂಗಿ
ಚೂಡಾಮಣೀಂತ__"
[ಎಷ್ಟೊಂದು ಜನ ಹುಡುಗಿಯರು!]
"ಏನು ಸಮಾಚಾರ?"
“ಇಂದಿರೆಯ ತಾಯಿ ಕರೆದಿದಾರೇಂತ ಹೇಳೋಕೆ ಬಂದಿದ್ಲು.”
"ಹೋಗಿ ನೋಡಿದಿರಾ?"
"ಊಟಕ್ಕೆ ಕಣೆ ಕರೆದಿರೋದು. ಇಬ್ಬರನ್ನೂ."
"ಊಟಕ್ಕೆ ಕರೆಯೋರು ಮನೆಗೆ ಬರ್‍ಬೇಕು. ಶಾಲೇಲಿ ಏನು ಕೆಲಸ ಅವರಿಗೆ?"
“ಚೂಡಾಮಣಿ ವಿದ್ಯಾರ್ಥಿನಿ ಕಣೇ. ಏಳನೆ ತರಗತೀಲಿ ಓದ್ತಿದಾಳೆ. ನನ್ನ
ಶಿಷ್ಯೆ."
"ಹಾಗೋ. ಏನ್ಹೇಳಿದಿರಿ? ಒಪ್ಕೊಂಡಿರಿ ತಾನೆ?"
“ಮನೇಲಿ ಕೇಳಿ ಹೇಳ್ತೀನಿ ಅಂದೆ."
"ನಿಜವಾಗ್ಲೂ ?”
"ಹೂ೦. ಅವತ್ತು ಹೇಳ್ಳಿಲ್ವೆ ನೀನು, ಇನ್ನು ಮುಂದೆ ಯಾರ ಮನೆಗೂ
ಬರೋದಿಲ್ಲಾಂತ?”
ಸಂತುಷ್ಟಳಾದಳು ಸುನಂದಾ. ಆಕೆ ಕಾಫಿ ಸೋಸಿ, ತೊಂಬಿದ ಲೋಟವನ್ನು
ಜಯದೇವನ ಮುಂದಿರಿಸಿದಳು.
ಸುನಂದೆ ಸುಮ್ಮನಿದ್ದಳೆಂದು ಜಯದೇವನೆ ಕೇಳಿದ: