ಪುಟ:ನವೋದಯ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

408

ಸೇತುವೆ

"ಇಲ್ಲ ಸುನಂದಾ. ನಿನಗೆ ಅದರಲ್ಲೆಲ್ಲ ನಂಬಿಕೆ ಇಲ್ಲ, ಸುಮ್ನೆ ಕುತೂಹಲಕ್ಕೆ
ಕೇಳ್ದೆ-ಅಂತ ನನಗೆ ತಿಳೀದೆ?"
“ಆದರೂ ಊಹಿಸಿ ಹೇಳೋಕೆ ಆಗೊಲ್ವೆ?"
“ನೋಡೋಕೆ ಬೆಳ್ಳಗಿದಾರೆ. ಇನ್ನೇನೂಂತ ಹೇಳ್ಲೆ?"
ಇಂದಿರೆಯ ಮನೆಯಲ್ಲಿ ಆ ಮಗಳೂ ತಾಯಿಯೂ ತೋರಿದ ಆದರ ಕಂಡು,
ಸುನಂದೆಗೆ ಮಾತೇ ಹೊರಡಲಿಲ್ಲ. ಇಂದಿರೆಯ ತಾಯಿಯನ್ನು ನೋಡುತ್ತ ಆಕೆಗೆ,
ತನ್ನನ್ನು ಹೆತ್ತವಳ ನೆನಪಾಯಿತು. ವಯಸ್ಸಿನಲ್ಲಿ ತನ್ನ ತಾಯಿ ಹಿರಿಯವಳಾಗಿದ್ದರೂ
ಇಬ್ಬರದೂ ತುಂಬುಮುಖ. ಒಂದೇ ರೀತಿಯ ಮೂಗು. ಅಷ್ಟೇ ಎತ್ತರ. ಈ
ಹಣೆಯಲ್ಲಿ ಮಾತ್ರ ಕುಂಕುಮ ಇರಲಿಲ್ಲ. ಇಂದಿರೆಯಂತೂ, ತನ್ನ ಜಯದೇವನನ್ನು
ಮರುಳುಗೊಳಿಸಲು ಯತ್ನಿಸಿದ್ದ ಚದುರೆಯಂತಲ್ಲ. ಮುಗ್ಧೆಯಾದ ತಂಗಿಯಂತೆ
ಸುನಂದೆಗೆ ಕಂಡಳು. ಮೊದಲ ಒಂದೆರಡು ಮಾತುಗಳಾದೊಡನೆಯೆ ಅವರು
ಆತ್ಮೀಯರಾದರು.
ನಡುವೆ, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ತನ್ನ ಇಬ್ಬರು ತಮ್ಮಂದಿರೊಡನೆ
ಚೂಡಾಮಣಿಯೂ ಒಮ್ಮೆ ಬಂದು ಹೋದಳು. ಕರೆದುದು ಇಂದಿರೆಯ ತಾಯಿ
ಯಾದರೂ ಆ ಆಹ್ವಾನವನ್ನು ತಲಪಿಸಿದವಳು ಆಕೆಯಲ್ಲವೆ? ಆಹ್ವಾನಿತರು ಬಂದರೇ
ಏನೆಂದು, ನೋಡಬೇಕಾದ ಜವಾಬ್ದಾರಿ ಆಕೆಗಿಲ್ಲವೆ?
ಚೂಡಾಮಣಿ ಊಟ ಮಾಡಲಿಲ್ಲ. ಆದರೆ ಉಪಾಧ್ಯಾಯರ ಗೌರವಾರ್ಥವಾಗಿ
ತಯಾರಿಸಿದ್ದ ತಿಂಡಿ ತಿಂದಳು.
ಶ್ಯಾವಿಗೆ ಪಾಯಸ, ಒಡೆ ಕೋಡುಬಳೆ, ಸಿಹಿ ಬೂಂದಿ ಖಾರ ಬೂಂದಿ,
ಚಿತ್ರಾನ್ನ, ಅನ್ನ-ಅದು ಸಾಲದೆಂದು ಕುದಿಯಲು ಖೀರು, ಕುಯ್ಯಲು ಚಾಕು
ಬೇಕೇನೋ ಎನಿಸುತ್ತಿದ್ದ ಗಟ್ಟಿ ಮೊಸರು, ಕೇಸರಿ ಹಾಕಿದ್ದ ತಂಪಾದ ನೀರು.
"ಇಷ್ಟೆಲ್ಲಾ ನೀವು ಮಾಡಬಾರದಾಗಿತ್ತು," ಎಂದ ಜಯದೇವ.
"ನೀವೇನು ದಿನಾ ಬರ್‍ತೀರ ಹೇಳಿ?" ಎಂದರು, ದಂಪತಿಯ ಜತೆಯಲ್ಲಿ ಊಟಕ್ಕೆ
ಕುಳಿತಿದ್ದ ಇಂದಿರೆಯ ತಾಯಿ.
"ನನಗಂತೂ ಇ೦ಥ ಒ೦ದು ಅಡುಗೆಯೂ ಮಾಡೋಕೆ ಬರೊಲ್ಲಮ್ಮ," ಎಂದಳು
ಸುನಂದಾ, ಯಾವ ಮುಚ್ಚು ಮರೆಯೂ ಇಲ್ಲದೆ.
"ಅಡುಗೆದೇನು ಮಹಾ! ಎಲ್ಲಾ ತನ್ನಷ್ಟಕ್ಕೆ ಬಂದ್ಬಿಡುತ್ತೆ. ನಮ್ಮ ಇಂದಿರೆಗೆ
ಬರ್‍ತಾ ಇತ್ತೂಂತ ತಿಳಿದ್ರೇನು? ನೆರೆಯವರೆಲ್ಲ ಬಯ್ತಿದ್ರು-ಮುದ್ದಿಸಿ ಮುದ್ದಿಸಿ ಗಂಡು
ಹುಡುಗನ ತರಹೆ ಬೆಳೆಸ್ತಿದೀಯಾ ಅಂತ. ಸ್ಕೂಲು ಮುಗಿಯೋವರೆಗೂ ಅಡುಗೆ
ಮನೆ ಮುಖ ಆಕೆ ನೋಡಿದವಳೇ ಅಲ್ಲ. ಈಗ್ನೋಡಿ. ಇವತ್ತಿನ ಮುಕ್ಕಾಲುಪಾಲು
ಅಡುಗೆಯೆಲ್ಲ ಅವಳದೇ."
ತಾಯಿಯ ಹೊಗಳಿಕೆ ಕೇಳಿ ಲಜ್ಜೆಯಿಂದ ಇಂದಿರಾ, ಒಂದು ಕ್ಷಣ ಅಡುಗೆ