ಪುಟ:ನವೋದಯ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

411

“ಹೇಳೆ. ಇವರೇನು ಹೊರಗಿನವರೆ? [ಜಯದೇವ-ಸುನಂದೆಯರ ಕಡೆಗೆ
ತಿರುಗಿ] ಈ ಊರಲ್ಲಿ ಸಂಗೀತ ಮೇಸ್ಟ್ರು ಎಲ್ಲಿ ಸಿಗ್ಬೇಕು? ಶಾಸ್ತ್ರೀಯವಾಗಿ ಅಭ್ಯಾಸ
ವಾಗಿಲ್ಲ. ನನಗೆ ಗೊತ್ತಿರೋ ಒಂದೆರಡು ಕೀರ್ತನೆ ಹೇಳ್ಕೊಟ್ಟಿದೀನಿ."
ಇಂದಿರಾ ವೀಣೆಯನ್ನು ಕೈಗೆತ್ತಿಕೊಂಡು, ತಂತಿಗಳ ಸಮ್ಮತಿ ಕೇಳಿದಳು. ಶ್ರುತಿ
ಸರಿಪಡಿಸಿದಳು.
ವೀಣೆಯ ನಾದಮಾಧುರ್ಯ ಆ ವಾತಾವರಣದ ಮೇಲೆ ಮೋಡಿಬೀಸಿತು.
ಇಂದಿರೆಯ ಕೋಮಲ ಕಂಠ, ಬೀಸಿದ ಬಲೆಯನ್ನು ಬಲಗೊಳಿಸಿತು.
'ನಗುಮೋಮು ಘನ ಲೇನಿ...'
ಅದಾದ ಬಳಿಕ-
'ಶೃಂಗಾರ ಲಹರಿ....'
ಕೊನೆಗೆ_
'ಹಿಮಗಿರಿತನಯೆ ಹೇಮಲತೆ...'
ನುಡಿಸುತ್ತಿದ್ದಾಗ ಇರದಿದ್ದ ಸಂಕೋಚ, ವೀಣೆಯನ್ನು ಕೆಳಗಿರಿಸಿದಾಗ ಇಂದಿ
ರೆಯ ಬಳಿಗೆ ಬಂತು.
ಜಯದೇವನೆಂದ:
"ದಿವ್ಯವಾದ ಕಂಠ!”
ಸುನಂದಾ ಅಂದಳು:
"ಚೆನ್ನಾಗಿತ್ತಮ್ಮ!"....
ಸಂಜೆ ಮೋಡಗಳು ಕವಿದು ಮಳೆ ಬೀಳುವುದಕ್ಕೆ ಮುಂಚೆಯೆ ಜಯದೇವ
ಮತ್ತು ಸುನಂದಾ ಮನೆ ಸೇರಿದರು.
ನೆರೆಮನೆಯ ಹುಡುಗ ಬಂದು ಹೇಳಿದ:
"ಪ್ರಾಥಮಿಕ ಶಾಲೆಯ ತಿಮ್ಮಯ್ಯ ಮೇಸ್ಟ್ರು ಎರಡು ಸಲ ಬಂದಿದ್ರು ಸಾರ್."
ಹರಟೆ ಹೊಡೆಯಲು ಭಾನುವಾರವೇ ಅನುಕೂಲವೆಂದು ಹಳ್ಳಿಯಿಂದಲೇ
ಅವರು ಬಂದಿದ್ದರೇನೋ, ಎಂದು ಜಯದೇವ ಕಸಿವಿಸಿಗೊಂಡ.
"ಯಾರು?" ಎಂದು ಕೇಳಿದಳು ಸುನಂದಾ.
"ಮುದ್ದಣ ಕಣೇ."
“ಓ!"
...ರಾತ್ರೆ ಮಲಗಿದ ಬಳಿಕ ಸುನಂದಾ ಕೇಳಿದಳು:
"ಇಂದಿರೆಯ ತಾಯಿ ಮದುವೆಯಾಗೋಕ್ಮುಂಚೆ ಏನಾಗಿದ್ದರೂಂದ್ರೆ?"
"ಗೊತ್ತಿಲ್ಲ. ಏನೇ ಆಗಿರ್ಲಿ. ಅದು ನಮಗೆ ಮುಖ್ಯವೆ ಹೇಳು?"
"ಅಲ್ಲ..."